ಹಾವೇರಿ: ದೊಡ್ಡಾಟ ಬಯಲಾಟಗಳು ಜನಮಾನಸದಿಂದ ದೂರ ಸರಿಯುತ್ತಿವೆ ಎಂಬ ಮಾತಿಗೆ ಅಪವಾದ ಎಂಬಂತೆ ಹೊಸ ಭರವಸೆ ಹುಟ್ಟಿಸುವ ವೀರರಾಣಿ ಕಿತ್ತೂರು ಚೆನ್ನಮ್ಮ ದೊಡ್ಡಾಟ ಇಲ್ಲಿಯ ಹುಕ್ಕೇರಿಮಠ ಮಹಿಳಾ ಕಾಲೇಜಿನ ಆವರಣದಲ್ಲಿ ಪ್ರದರ್ಶನವಾಯಿತು. ಖ್ಯಾತ ನಾಟಕಕಾರ, ರಂಗಕರ್ಮಿ ಎಂ.ಎಸ್. ಮಾಳವಾಡ ರಚಿಸಿದ ಈ ದೊಡ್ಡಾಟವನ್ನು ಇಂಗಳಗಿಯ ಗ್ರಾಮರಂಗ ಕಲಾತಂಡ ಪ್ರದರ್ಶನ ಮಾಡಿತು.
ಸರಳ ರಂಗಸಜ್ಜಿಕೆಯಲ್ಲಿ ಆರಂಭವಾದ ರಾಣಿ ಚೆನ್ನಮ್ಮಳ ದೊಡ್ಡಾಟ ದೇಶ ಪ್ರೇಮ ಮತ್ತು ಸ್ವಾಭಿಮಾನದ ಸಂದೇಶವನ್ನು ಜನಮನ ಮುಟ್ಟುವಲ್ಲಿ ಯಶಸ್ವಿಯಾಯಿತು. ವೀರ ರಸವೇ ಪ್ರಧಾನ ಗುಣವಾಗಿದ್ದ ಎರಡು ಗಂಟೆಗಳ ವೀರ ರಾಣಿ ಚೆನ್ನಮ್ಮ ದೊಡ್ಡಾಟ ಪ್ರೇಕ್ಷಕರನ್ನು ಉಸಿರು ಬಿಗಿಹಿಡಿಯುವ ಮಟ್ಟಿಗೆ ಗತ್ತನ್ನು ಕಾಪಾಡಿಕೊಂಡಿತ್ತು. ಸ್ವಾತಂತ್ರ್ಯ ಸಂಗ್ರಾಮದ ದಂತಕಥೆಯಾದ ಚೆನ್ನಮ್ಮಳ ಸಾಹಸ, ತ್ಯಾಕರೆಯ ಸಾವು ಹಾಗೂ ದುರಂತಮಯವಾದ ಕಿತ್ತೂರ ಸಂಗ್ರಾಮವನ್ನು ಮತ್ತೊಮ್ಮೆ ನೆನಪಿಗೆ ತರುವಲ್ಲಿ ದೊಡ್ಡಾಟ ತನ್ನ ಛಾಪನ್ನು ಬಿತ್ತಿತು. ಆರಂಭದಲ್ಲಿ ರಾಣಿ ಚೆನ್ನಮ್ಮಳ ಮಾನವೀಯ ಗುಣ, ಜನ ಉಪಯೋಗಿ ಸಾಮಾಜಿಕ ಕಾರ್ಯ ಬಿಂಬಿಸುತ್ತ ಬೆಳೆಯುವ ದೊಡ್ಡಾಟ, ಕೊನೆಯಲ್ಲಿ ಅಷ್ಟೇ ಮಾರ್ಮಿಕವಾಗಿ ಅವಳ ಸಾವನ್ನು ತೋರಿಸುತ್ತ ಕುಳಿತವರ ಹೃದಯವನ್ನು ಕಲಕಿತು. ಚೆನ್ನಮ್ಮಳ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ಮತ್ತೆ ಕೊನೆಯಲ್ಲಿ ಹೋರಾಟಕ್ಕೆ ಇಳಿಯುವ ಮೂಲಕ ಆಶಾದಾಯಕ ಮುಕ್ತಾಯವನ್ನೂ ಕೂಡ ಈ ದೊಡ್ಡಾಟ ಸಾರಿತು.
ಹೊಸಕಾಲಕ್ಕೆ ತಕ್ಕಂತೆ ಪ್ರತಿ ಸನ್ನಿವೇಷದ ಬದಲಾವಣೆಯಾದಾಗ ಸಮಯದ ಅಪವ್ಯಯ ಮಾಡದೇ, ಕುಣಿತದ ಮೂಲಕ ದೃಶ್ಯಗಳಲ್ಲಿ ಪ್ರವೇಶಿಸುತ್ತಿದ್ದ ಕಲಾವಿದರ ಚಾಕಚಕ್ಯತೆ ವಿಶಿಷ್ಟ ಅನುಭೂತಿ ನೀಡಿತು. ಹಿಮ್ಮೇಳದ ಹಾಡುವಿಕೆ, ಕೊಳವಿ, ಮದ್ದಳೆ, ತಾಳ ಅದ್ಭುತವಾಗಿ ದೊಡ್ಡಾಟದ ರಂಗನ್ನು ರಾಚುತ್ತಿತ್ತು. ರಂಗ ಪಕ್ಕದಲ್ಲಿಯೇ ವಿಶಿಷ್ಟ ವೇಷ-ಭೂಷಣ ತೊಟ್ಟು ಹಾಡುತ್ತಿದ್ದ ಕಲಾವಿದರು ನೋಡುಗರನ್ನು ಸೆಳೆದರು. ಹಿಮ್ಮೇಳದಲ್ಲಿ ಕತೆಗಾರರಾಗಿ ವೀರೇಶ ಬಡಿಗೇರ ಮತ್ತು ಬಸವರಾಜ ಶಿಗ್ಗಾಂವಿ, ಚಂದ್ರಶೇಖರಯ್ಯ ಗುರಯ್ಯನವರ, ಶಹನಾಯಿ ವಾದಕ ಹೇಮಂತ ಭಜಂತ್ರಿ, ಶಿವಪ್ಪ ಹುಬ್ಬಳ್ಳಿ, ಸುನಂದಾ ನಿಂಬನಗೌಡ್ರ ಮುಂತಾದವರಿದ್ದರು.
ಚೆನ್ನಮ್ಮಳ ಪಾತ್ರಧಾರಿ ನಂದಾ ಭಜಂತ್ರಿ, ಮಲ್ಲಸರ್ಜನ ಪಾತ್ರಧಾರಿ ಬಸವರಾಜ ಕರಿಮಲ್ಲಣ್ಣನವರ, ಮಹಾಪ್ರಧಾನಿ ಗುರುಸಿದ್ಧ ಪಾತ್ರಧಾರಿ ರಾಜಶೇಖರ ಮಾಳವಾಡ ಇಡೀ ನಾಟಕವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾದರು.
ಸಿದ್ಧಾರೂಢ ಬಡಿಗೇರ (ಶಿವಲಿಂಗ ರುದ್ರಸರ್ಜ), ಶಿವು ಲಮಾಣಿ (ಕಲ್ಮಠ ಸ್ವಾಮಿಗಳು) ವೀರೇಶ ಮುದೋಡಿ (ಮಲ್ಲಪ್ಪ ಶೆಟ್ಟಿ), ಚಂದ್ರು ಮಾಳಪ್ಪನವರ (ವೆಂಕಟರಾವ್), ಬಸವರಾಜ ದೊಡ್ಡಮನಿ (ರಾಯಣ್ಣ), ಪರಮೇಶಪ್ಪ ಕಡಳ್ಳಿ (ತ್ಯಾಕರೆ), ವಿಠ್ಠಲ ಭಾಗಣ್ಣನವರ (ಮನ್ರೋ), ಕೃಷ್ಣ ಜಾಧವ (ಸೈದನಸಾಬ), ಶರಣಪ್ಪ ಅಯ್ಯಣ್ಣನವರ (ಸಾರಥಿ) ಮುಂತಾದ ಪಾತ್ರಗಳಲ್ಲಿ ಅರ್ಥಪೂರ್ಣವಾಗಿ ಅಭಿನಯ ನೀಡಿದರು. ವೇಷ-ಭೂಷಣವನ್ನು ಶಂಕರ ಅರ್ಕಸಾಲಿ ನಿರ್ವಹಿಸಿದರು. ಒಟ್ಟು ನಾಟಕದ ಸಂಯೋಜನೆಯನ್ನು ಹಿರಿಯ ದೊಡ್ಡಾಟ ನಟಿ ಮತ್ತು ಇಡಾರಿ ಸಂಸ್ಥೆ ನಿರ್ವಾಹಕಿ ಪರಿಮಳಾ ಜೈನ್ ಹಿನ್ನೆಲೆಯಾಗಿ ಮಾಡಿದ್ದರು.