ಬೆಳಗಾವಿ: ಖೊಟ್ಟಿ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ನೌಕರಿ ಪಡೆದಿದ್ದ ಇಬ್ಬರು ಆರೋಪಿಗಳನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹಿರೇಅಣಜಿ ಗ್ರಾಮದ ಭರಮಪ್ಪ ಮೂಕಪ್ಪ ಹೊಸಮನಿ ಹಾಗೂ ಧಾರವಾಡದ ಹುಮಾಯೂನ ದಸ್ತಗೀರಸಾಬ ಬಾಲಸಿಂಗ್ ಎಂಬಾತರೇ ಸರ್ಕಾರಕ್ಕೆ ಮೋಸ ಮಾಡಿದವರು.
ಭರಮಪ್ಪ ಮೂಕಪ್ಪ ಹೊಸಮನಿ ಹಿಂದು ಬೋವಿ ಪ್ರವರ್ಗ-1 ಜಾತಿಗೆ ಸೇರಿದ್ದರೂ ಬ್ಯಾಡಗಿ ತಹಸೀಲ್ದಾರರಿಂದ 24.1.1978 ರಂದು ಭೋವಿ (ಎಸ್ಸಿ) ಎಂದು ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿದ್ದರು. ಈ ಪ್ರಮಾಣಪತ್ರದ ಆಧಾರದ ಮೇಲೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ನಗರದ ಎಸ್ವಿಎಂ ಕಾಲೇಜಿನಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯಡಿ ಉಪನ್ಯಾಸಕ ನೌಕರಿಗೆ ಸೇರಿದ್ದರು. ಸದ್ಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಭರಮಪ್ಪ ಹೊಸಮನಿ ಪರಿಶಿಷ್ಟ ಜಾತಿಗೆ ಸೇರಿರುವುದಿಲ್ಲವೆಂದು ಹಾವೇರಿ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರು ತೀರ್ಮಾನಿಸಿ, 24.1.1978 ರಂದು ನೀಡಿದ ಖೊಟ್ಟಿ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸಿದ್ದಾರೆ.
ಧಾರವಾಡ ಹುಮಾಯೂನ ದಸ್ತಗೀರಸಾಬ ಬಾಲಸಿಂಗ್ ಮುಸ್ಲಿಂ (ಸುನ್ನ್ನಿ) ಜಾತಿಗೆ ಸೇರಿದ್ದರೂ ಬಿಜಾಪುರ ಜಿಲ್ಲೆಯ ಇಂಡಿ ತಹಸೀಲ್ದಾರರಿಂದ 15.10.1982 ರಂದು ಚೋದರಾ (ಎಸ್ಟಿ) ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದರು. ಈ ಪ್ರಮಾಣಪತ್ರದ ಆಧಾರದ ಮೇಲೆ ಪರಿಶಿಷ್ಟ ಪಂಗಡದ ಮೀಸಲಾತಿಯಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿ, ಮುಂಬಡ್ತಿ ್ನಪಡೆದಿರುವ ಬಗ್ಗೆ ತನಿಖೆಯಿಂದ ಸಾಬೀತಾಗಿದೆ. ಇಂಡಿ ತಹಸೀಲ್ದಾರ ನೀಡಿದ ಎಸ್ಟಿ ಜಾತಿ ಪ್ರಮಾಣಪತ್ರವನ್ನು ಬಿಜಾಪುರ ಜಿಲ್ಲಾಧಿಕಾರ್ನಿ ರದ್ದುಪಡಿಸಿದ್ದಾರೆ.
ಇಬ್ಬರು ಆರೋಪಿಗಳು ಪರಿಶಿಷ್ಟ ಪಂಗಡದ ಜನರಿಗೆ ಮತ್ತು ಸರ್ಕಾರಕ್ಕೆ ಮೋಸ ಮಾಡಿ ಅಪರಾಧವೆಸಗಿದ್ದಾರೆ. ಹೀಗಾಗಿ ಭರಮಪ್ಪ ಹೊಸಮನಿ ವಿರುದ್ಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಹಾಗೂ ಹುಮಾಯೂನ ಬಾಲಸಿಂಗ್ ವಿರುದ್ದ ಬಿಜಾಪುರ ಜಿಲ್ಲೆಯ ಇಂಡಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲು ಆಗಿದೆ.
ಈ ಪ್ರಕರಣವನ್ನು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಅಶೋಕ ಕುರೇರ ಅವರ ಮಾರ್ಗದರ್ಶನದಲ್ಲಿ ಬಾಗಲಕೋಟೆ ಜಿಲ್ಲೆಯ ಡಿಸಿಆರ್ಇ ಘಟಕದ ಸಿಪಿಐ ಎಸ್.ಡಿ. ಬಿರಾದರ ಹಾಗೂ ಬಿಜಾಪುರ ಜಿಲ್ಲೆಯ ಡಿಸಿಆರ್ಇ ಘಟಕದ ಸಿಪಿಐ ಬಿ.ಆರ್. ಚೌಕಿಮಠ ತನಿಖೆ ಕೈಗೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.