ಬ್ಯಾಡಗಿ: ಎರಡನೇ ಬಾರಿ ಸಂಸತ್ತಿಗೆ ಆಯ್ಕೆಯಾದ ಶಿವಕುಮಾರ ಉದಾಸಿ ಚುನಾವಣೆಯ ಸವಾಲನ್ನು ಎದುರಿಸಿ ಗೆದ್ದಿರಬಹುದಾದರೂ ಬ್ಯಾಡಗಿ ತಾಲೂಕಿನ ಸಮಸ್ಯೆಗಳ ಸರಮಾಲೆಗಳು ಅವರ ಎದುರಿಗಿವೆ.
ಬ್ಯಾಡಗಿ ವಿಶ್ವ ಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆ ಹೊಂದಿದೆ. ಆದರೂ ಅದಕ್ಕೆ ಪೂರಕವಾದ ಸಮಸ್ಯೆಗಳು ರೈತರು ಹಾಗೂ ವ್ಯಾಪಾರಸ್ಥರನ್ನು ಕಾಡುತ್ತಿದ್ದು, ನೂತನ ಸಂಸದರು ಇವುಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕಾಗಿದೆ.
ಮೆಣಸಿನಕಾಯಿ ಗಿಡಗಳಿಗೆ ಎರಗುತ್ತಿರುವ ಮುಟುರು(ವೈರಸ್) ರೋಗದಿಂದಾಗಿ ಕೃಷಿಕರು ವಿಮುಖರಾಗುತ್ತಿದ್ದಾರೆ. ರೋಗದಿಂದಲೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಾವೇರಿ ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆಯುವ ಕ್ಷೇತ್ರವೇ ಮಾಯವಾಗಿದ್ದು, ಗದಗ ಜಿಲ್ಲೆಯಲ್ಲಿ ಮಾತ್ರ ಉಳಿದಿದೆ. ಹೀಗಾಗಿ, ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ರೋಗ ನಿವಾರಣೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕಾಗಿದೆ.
ವಿಮೆ ವ್ಯಾಪ್ತಿಗೆ: ಮುಂದಿನ ಕೆಲ ವರ್ಷಗಳಲ್ಲಿ ಬ್ಯಾಡಗಿ ತಳಿ ಮೆಣಸಿನಕಾಯಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. ಹೈಬ್ರೀಡ್ ಬೀಜ ಕಂಪನಿಗಳ ಅಬ್ಬರಕ್ಕೆ ಸಂಪ್ರಾದಾಯಿಕ ಹಾಗೂ ವಿಶ್ವ ಶ್ರೇಷ್ಠ ಬ್ಯಾಡಗಿ ತಳಿ ನಲುಗಿದೆ. ಹೀಗಾಗಿ ಮೆಣಸಿನಕಾಯಿಯನ್ನು ವಿಮೆ ವ್ಯಾಪ್ತಿಯಲ್ಲಿ ತರಬೇಕೆನ್ನುವುದು ಇಲ್ಲಿನ ರೈತರ ಬಹುದಿನದ ಬೇಡಿಕೆ. ಇದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದು, ಮಾಜಿ ಸಚಿವ ಸಿ.ಎಂ. ಉದಾಸಿ ರೈತರ ನಿಯೋಗದೊಂದಿಗೆ ದೆಹಲಿಗೆ ತೆರಳಿ ಕೇಂದ್ರದ ಕೃಷಿ ಸಚಿವರ ಮೇಲೆ ಒತ್ತಡ ತಂದರೂ ಪ್ರಯೋಜನವಾಗಿಲ್ಲ.
ತಳಿ ಅಭಿವೃದ್ಧಿಗೆ ಚಾಲನೆ: ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದಲ್ಲಿ ತಳಿ ಸಂಶೋಧನಾ ಕೇಂದ್ರ ತೆರೆಯಲಾಗಿದೆ. ಆದರೆ, ಅದಕ್ಕೆ ಒದಗಿಸಿದ ರು. 1ಕೋಟಿ ಅನುದಾನದಲ್ಲಿ ತಳಿ ಅಭಿವೃದ್ಧಿ ಮಾತ್ರ ಅಸಾಧ್ಯ ಎಂಬುದು ವಿಜ್ಞಾನಿಗಳ ಅಂಬೋಣ. ಸಂಶೋಧನಾ ಕೇಂದ್ರ ಇದ್ದೂ ಇಲ್ಲದಂತಾಗಿದ್ದು, ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ.
ಎಸ್ಟಿಸಿಎಲ್ ಉಳಿಸಿ: ಉದ್ದಿಮೆಯಾಗಿ ಬೆಳೆಯುತ್ತಿದ್ದಂತೆ ಪಟ್ಟಣದ ಹೊರವಲಯದಲ್ಲಿ ಕೇಂದ್ರ ಸರ್ಕಾರ ಸ್ವಾಮಿತ್ವದಲ್ಲಿ ಸುಮಾರು ರು. 4 ಕೋಟಿ ವೆಚ್ಚದಲ್ಲಿ 2008ರಲ್ಲಿ ಮೆಣಸಿನಕಾಯಿ ಸಂಸ್ಕರಣ ಘಟಕ (ಎಸ್ಟಿಸಿಎಲ್) ತಲೆ ಏತ್ತಿತು. ಪ್ರಚಾರ ಹಾಗೂ ಅನುದಾನ ಕೊರತೆಯಿಂದ ಕಾರ್ಯಾರಂಭ ಮಾಡಿದ 2 ವರ್ಷದ ಬಳಿಕ ನಷ್ಟ ಅನುಭವಿಸುತ್ತಿದ್ದು, ಬೃಹತ್ ಕಾರ್ಖಾನೆ ಮುಚ್ಚುವ ಹಂತ ತಲುಪಿದೆ.
ಸ್ಪೈಸ್ ಪಾರ್ಕ್: 15 ವರ್ಷಗಳಿಂದೀಚೆಗೆ ಮೆಣಸಿನಕಾಯಿ ಮೇಲೆ ಪ್ರಯೋಗಗಳು ನಡೆದ ಪರಿಣಾಮ ಅಮೂಲಾಗ್ರ ಬದಲಾವಣೆ ಕಂಡಿದೆ. ಉದ್ದಿಮೆಯಾಗಿ ಮಾರ್ಪಟ್ಟಿದ್ದರ ಪರಿಣಾಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿವಿಧ ಹಂತಗಳಲ್ಲಿ 6 ಬಾರಿ ತೆರಿಗೆ ಸಂಗ್ರಹವಾಗಲಿದೆ. ಮೆಣಸಿನಕಾಯಿ ಉದ್ಯಮ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾದ ಸರ್ಕಾರ ಸ್ಪೈಸ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದ್ದವು. ಇದಕ್ಕಾಗಿ ಪಟ್ಟಣದಲ್ಲಿ 119 ಎಕರೆ ರೈತರ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದ್ದು, ರೈತರ ವಿರೋಧದಿಂದಾಗಿ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಸಂಸದ ಶಿವಕುಮಾರ ಉದಾಸಿ ಇದಕ್ಕೆ ಚಾಲನೆ ನೀಡಿ ಸ್ಪೈಸ್ ಪಾರ್ಕ್ ನಿರ್ಮಿಸಿ ಮೆಣಸಿನಕಾಯಿ ಉದ್ಯಮವನ್ನು ಉಳಿಸಿಕೊಳ್ಳಬೇಕಾಗಿದೆ.
- ಶಿವಾನಂದ ಮಲ್ಲನಗೌಡರ