ಬಿರುಗಾಳಿ, ಮಳೆ: ಅಪಾರ ಹಾನಿ

Updated on: 

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮೇ 20
ತಾಲೂಕಿನ ರಟ್ಟೀಹಳ್ಳಿ ಹೋಬಳಿಯ ಕಡೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಬೀಸಿದ ಬಿರುಗಾಳಿ ಮತ್ತು ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಸೋಮವಾರ ಮಧ್ಯಾಹ್ನದ ವೇಳೆಗೆ ಆರಂಭಗೊಂಡ ಗುಡುಗು ಸಹಿತ ಬಿರುಗಾಳಿ, ಮಳೆ ಜನರನ್ನು ಭಯಭೀತಗೊಳಿಸಿತು.
ಗಾಳಿಯ ರಭಸಕ್ಕೆ ಮರಗಳು ನೆಲಕ್ಕುರುಳಿದ್ದಲ್ಲದೆ, ಹಲವಾರು ರೈತರ ಮನೆಗಳ ಚಾವಣಿಯ ಹೆಂಚು ಹಾಗೂ ತಗಡುಗಳು ಹಾರಿ ಹೋಗಿವೆ. ಬಾಳೆ ಗಿಡ ಹಾಗೂ ತೆಂಗಿನ ಗಿಡಗಳು ನೆಲಕಚ್ಚಿವೆ.
ಕಡೂರು ಗ್ರಾಮದ ಮೊರಾರ್ಜಿ ಟೊಣಕಪ್ಪನವರ ಮನೆಯ ಚಾವಣಿಗೆ ಹಾಕಿದ 25ಕ್ಕೂ ಹೆಚ್ಚು ತಗಡುಗಳು ಗಾಳಿಯ ರಭಸಕ್ಕೆ ಕಿತ್ತು ಸಮೀಪದಲ್ಲದ್ದ ಹುಣಸೆ ಮರದಲ್ಲಿ ಸಿಲುಕಿವೆ. ಚಾವಣಿ ಕಿತ್ತಿದ್ದರಿಂದ ಭಾರಿ ಮಳೆಗೆ ರೈತರ ಕುಟುಂಬ ತೀವ್ರ ಸಂಕಷ್ಟ ಎದುರಿಸಬೇಕಾಯಿತು. ಮನೆಯಲ್ಲಿದ್ದ ಆಹಾರ ಧಾನ್ಯಗಳು ಹಾಗೂ ಬಟ್ಟೆ ಬರೆಗಳು ಸಂಪೂರ್ಣವಾಗಿ ಮಳೆಯ ನೀರಿನಲ್ಲಿ ಹಾಳಾಗಿವೆ. ತೀವ್ರ ಮಳೆಗೆ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಬೀಳುವ ಹಂತ ತಲುಪಿವೆ.
ಗಾಳಿಯ ರಭಸಕ್ಕೆ ಬೃಹತ್ ನಿಲಗಿರಿ ಮರವೊಂದು ಮಹೇಶಪ್ಪ ಕರೂರು ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಜಖಂಗೊಂಡಿದೆ. ಗ್ರಾಮದ ಜಯದೇವಪ್ಪ ಸಾಹುಕಾರ, ನಾಗೇಂದ್ರಪ್ಪ ಕಡೂರ, ಹನುಮಂತಪ್ಪ ಗುಬ್ಬಿ ಎಂಬುವರ ಮನೆಯ ಹೆಂಚು ಹಾಗೂ ತಗಡುಗಳು ಹಾರಿಹೋಗಿವೆ. ವಸಂತಪ್ಪ ಸುಣಗಾರ ಎಂಬುವರ ತೋಟದಲ್ಲಿ ತೆಂಗಿನ ಮರಗಳು ನೆಲಕಪ್ಪಳಿಸಿವೆ. ಶಂಕರಪ್ಪ ಶಿರಗಂಬಿ ಎಂಬುವರ ಬಾಳೆ ತೋಟ ಹಾನಿಗೀಡಾಗಿದೆ. ಕೆಲ ರೈತರ ಮೇವಿನ ಹಾಗೂ ಕಟ್ಟಿಗೆ ಬಣವೆಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ.
ಶಾಸಕ ಬಣಕಾರ ಭೇಟಿ: ಬಿರುಗಾಳಿ, ಮಳೆಯಿಂದಾಗಿ ಹಾನಿಗೀಡಾದ ಸ್ಥಳಕ್ಕೆ ಶಾಸಕ ಯು.ಬಿ. ಬಣಕಾರ ಭೇಟಿ ನೀಡಿ ಪರಿಶೀಲಿಸದರು. ಈ ಸಂದರ್ಭದಲ್ಲಿ ಮಾತನಾಡಿ, ಬಿರುಗಾಳಿ, ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸಿ ಹಾನಿಯ ವರದಿಯನ್ನು ತಕ್ಷಣವೇ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com