ಸೋಮವಾರಪೇಟೆ: ರೋಗಿಗಳ ಆರೋಗ್ಯ ರಕ್ಷಣೆಯ ಮಹತ್ತರ ಜವಾಬ್ದಾರಿ ಹೊಂದಿರುವ ಶುಶ್ರೂಷಕಿಯರು ಯಾವ ಸಂದರ್ಭದಲ್ಲೂ ಶ್ರದ್ಧೆ ಕಳೆದುಕೊಳ್ಳಬಾರದು ಎಂದು ಜಿ.ಪಂ. ಅಧ್ಯಕ್ಷ ಬಿ. ಶಿವಪ್ಪ ಹೇಳಿದರು.
ಭಾರತ್ ಸೇವಕ್ ಸಮಾಜದ ಆಶ್ರಯದಲ್ಲಿ ಸೋಮವಾರಪೇಟೆಯಲ್ಲಿ ನಡೆಯುತ್ತಿರುವ ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಕೇರ್ ಟ್ರೈನಿಂಗ್ ಸೆಂಟರ್ನ ಹಿರಿಯ ವಿದ್ಯಾರ್ಥಿಗಳಿಗೆ ಇಲ್ಲಿನ ಮಾನಸ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶುಶ್ರೂಷಕಿಯರು ತಮ್ಮ ಕರ್ತವ್ಯದಲ್ಲಿ ನಿಸ್ವಾರ್ಥತೆಯನ್ನು ಮೈಗೂಡಿಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಆರೋಗ್ಯ ರಕ್ಷಣೆಯ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶುಶ್ರೂಷಕಿಯರ ನಗುಮುಖ ಹಾಗೂ ಪ್ರಾಮಾಣಿಕ ಸೇವೆಯೇ ರೋಗಿಗಳ ಆರೋಗ್ಯವನ್ನು ಅರ್ಧಮಟ್ಟಿಗೆ ಸುಧಾರಿಸುವ ಚಿಕಿತ್ಸೆಯಾಗಿದೆ ಎಂದರು.
ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಕೃಷ್ಣಾನಂದ, ಪೊಲೀಸ್ ವೃತ್ತ ನಿರೀಕ್ಷಕ ಎಚ್.ಎನ್. ಸಿದ್ದಯ್ಯ, ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷೆ ಯಮುನಾ, ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಧು, ದೀಪಕ್, ಮೋಗೇರ ಸಮಾಜದ ಸಂಚಾಲಕ ಪಿ.ಕೆ. ಚಂದ್ರು, ರೈತ ಸಂಘದ ರಾಜ್ಯ ಕಾರ್ಯದರ್ಶಿ ನಿರ್ವಾಣಪ್ಪ, ಕಾಗಡಿಕಟ್ಟೆಯ ತಮ್ಮಯ್ಯ ಸೇರಿದಂತೆ ಇತರ ಪ್ರಮುಖರು ಇದ್ದರು.
ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಕೇರ್ ಸೆಂಟರ್ನ ಕಾರ್ಯಕ್ರಮಗಳ ಬಗ್ಗೆ ಸಂಸ್ಥೆಯ ಸಂಸ್ಥಾಪಕ ಸುಲೈಮಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಶಬರಿ ಪ್ರಾರ್ಥಿಸಿ, ತರಬೇತುದಾರರಾದ ಮಂಜುಳಾ ಸ್ವಾಗತಿಸಿದರು. ವಿದ್ಯಾರ್ಥಿನಿ ದಿವ್ಯಾ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.