ಗೋಣಿಕೊಪ್ಪಲು: ಸರ್ಕಾರದ 9-16 ವಯೋವಾನದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಯೋಜನೆಯಡಿ ವೈದ್ಯಕೀಯ ಸೌಲಭ್ಯ ವ್ಯವಸ್ಥೆ ಇದ್ದು ಇದರೊಂದಿಗೆ ಸಂಘ ಸಂಸ್ಥೆಗಳ ಸಹಕಾರದಿಂದ ವೈದ್ಯಕೀಯ ಶಿಬಿರ ನಡೆಸುವುದು ಎಂದು ಜಿ.ಪಂ. ಸದಸ್ಯೆ ಚೋಡುಮಾಡ ಶರೀನ್ ಸುಬ್ಬಯ್ಯ ಹೇಳಿದ್ದಾರೆ.
ಟಿ.ಶೆಟ್ಟಿಗೇರಿ ಸಂಭ್ರಮ ಮಹಿಳಾ ಸಾಂಸ್ಕೃತಿಕ ಮತ್ತು ಕ್ರೀಡಾ ಮಂಡಳಿ ಹಾಗೂ ವಿರಾಜಪೇಟೆಯ ದಂತ ಮಹಾವಿದ್ಯಾಲಯ ಆಶ್ರಯದಲ್ಲಿ ಟಿ.ಶೆಟ್ಟಿಗೇರಿ ಮಾಯಣಮಾಡ ಮಂದಯ್ಯ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ನಡೆದ ದಂತ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ದಂತ ಮಹಾವಿದ್ಯಾಲಯದ ಡಾ. ಅಭಿಷೇಕ್ ಮಾತನಾಡಿ, ದೇಹದಂತೆ ಬಾಯಿ, ಹಲ್ಲು, ಮುಖದ ಆರೋಗ್ಯ ಕಾಯ್ದುಕೊಳ್ಳುವುದು ಕೂಡ ಮುಖ್ಯ. ಜನರು ಎಲ್ಲಾ ಕಾಯಿಲೆಗೂ ತಕ್ಷಣ ವೈದ್ಯರನ್ನು ಕಾಣುತ್ತಾರೆ. ಆದರೆ ಹಲ್ಲಿಗೆ ಸಂಬಂಧಿಸಿದ ಕಾಯಿಲೆಗಳು ಬಂದರೆ ಉದಾಸೀನ ಮಾಡುತ್ತಾರೆ. ಕೊನೆಯ ಹಂತದಲ್ಲಿ ವೈದ್ಯಾಧಿಕಾರಿಗಳನ್ನು ಭೇಟಿ ಆಗುತ್ತಾರೆ. ಆ ಹಂತದಲ್ಲಿ ಏನೂ ಮಾಡಲಾಗದೆ ಹಲ್ಲನ್ನು ಕೀಳ ಬೇಕಾಗುತ್ತದೆ ಎಂದರು.
ಸಂಭ್ರಮ ಮಹಿಳಾ ಮಂಡಳಿ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ ಮಾತನಾಡಿ, ಮಕ್ಕಳು ಸಣ್ಣವರಿರುವಾಗಲೆ ಅವರಿಗೆ ಬಾಯಿ, ಹಲ್ಲುಗಳ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರೆ ಅವರು ಮುಂದಿನ ದಿನಗಳಲ್ಲಿ ತಾವೇ ಸ್ವರಕ್ಷಣೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಲ್ಲಿನ ತಪಾಸಣೆ ಹಾಗೂ ಚಿಕಿತ್ಸೆ ಮಾಡಿಸಿಕೊಂಡರು.
ಟಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷೆ ಬಿ.ಯು ಅನಿತ, ಮಾಯಣಮಾಡ ಮಂದಯ್ಯ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಚೊಟ್ಟೆಯಾಂಡಮಾಡ ಪಿ. ಕಾರ್ಯಪ್ಪ ಇದ್ದರು.
ಅಜ್ಜಮಾಡ ಸಾವಿತ್ರಿ ಪ್ರಾರ್ಥಿಸಿದರು. ಚಂಗುಲಂಡ ಅಶ್ವಿನಿ ಸತೀಶ್ ಸ್ವಾಗತಿಸಿ, ನಿರೂಪಿಸಿದರು. ಉಳುವಂಗಡ ಕಾವೇರಿ ಉದಯ ವಂದಿಸಿದರು.