ವಿರಾಜಪೇಟೆ: ಅಮ್ಮತ್ತಿ ಚೌಡೇಶ್ವರಿ ನಗರ ಕಾಲನಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಮನೆ ಸಂಪೂರ್ಣ ಸುಟ್ಟು ಹೋಗಿದ್ದು, ಅಂದಾಜು ರು. 50 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ.
ಚೌಡೇಶ್ವರಿ ನಗರದ ವೆಂಕಟೇಶ್ ನಾಗ ಎಂಬವರಿಗೆ ಸೇರಿದ ಮನೆಯಲ್ಲಿ ಮನೆಯಲ್ಲಿ ಮಂಗಳವಾರ ಅಪರಾಹ್ನ 2.30ಕ್ಕೆ ವಿದ್ಯುತ್ ಶಾರ್ಟ್ಸರ್ಕ್ಯೂಟ್ನಿಂದ ಮನೆಯ ಒಂದು ಭಾಗ ಮತ್ತು ಮನೆಯೊಳಗಿದ್ದ ಬಟ್ಟೆ, ಅಕ್ಕಿ ದಿನಸಿ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದೆ. ಮನೆಯವರು ಕೂಲಿ ಕೆಲಸಕ್ಕೆ ತೆರಳಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಪಕ್ಕದ ಮನೆಯವರು ಬೆಂಕಿ ನಂದಿಸಿದ್ದಾರೆ.
ಸ್ಥಳಕ್ಕೆ ತಾ.ಪಂ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ತಾ.ಪಂ. ಅಧ್ಯಕ್ಷರ ವಿವೇಚನಾ ನಿಧಿಯಿಂದ ರು. 5 ಸಾವಿರ, ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿಯಿಂದ ರು. 15 ಸಾವಿರ ಮನೆ ದುರಸ್ತಿಗೆ ತಕ್ಷಣ ನೀಡುವಂತೆ ತಿಳಿಸಿದರು.