ಮಡಿಕೇರಿ: ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ಮಧ್ಯಪ್ರದೇಶ ಮೂಲದ ಶಿವ ರಾಥೋಡ್(14) ಮಂಗಳವಾರದಿಂದ ನಾಪತ್ತೆಯಾಗಿದ್ದಾನೆ. ಸಾಂಸ್ಕೃತಿಕ ವಿನಿಮಯ ಯೋಜನೆಯಡಿ ಮಧ್ಯಪ್ರದೇಶದ ಇಂದೋರ್ನ ಸುಂದರ್ ಲಾಲ್ ಎಂಬುವವರ ಮಗ ಶಿವ ರಾಥೋಡ್ ಕಳೆದ ಸಾಲಿನ ಜೂನ್ನಲ್ಲಿ ಮಡಿಕೇರಿ ಬಳಿಯ ಗಾಳಿಬೀಡು ನವೋದಯ ವಿದ್ಯಾಲಯಕ್ಕೆ ಸೇರ್ಪಡೆಗೊಂಡಿದ್ದ. ಮಂಗಳವಾರ ಸಂಜೆ ಸಹಪಾಠಿಗಳೊಂದಿಗೆ ಕ್ರಿಕೆಟ್ ಆಟವಾಡಿ, ಶಾಲಾ ಆವರಣದಲ್ಲಿರುವ ಸ್ನಾನಗೃಹಕ್ಕೆ ತೆರಳಿದ ಬಾಲಕ ಅಲ್ಲಿಂದಲೇ ನಾಪತ್ತೆಯಾಗಿದ್ದಾನೆಂದು ಪ್ರಾಂಶುಪಾಲ ಐಸಾಕ್ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿಂದೆಯೂ ಈತ ನಾಪತ್ತೆಯಾಗಿ ಆತಂಕ ಮೂಡಿಸಿದ್ದನಾದರೂ ಆ ಬಳಿಕ ಶಾಲಾ ಆವರಣದಲ್ಲೇ ಪತ್ತೆಯಾಗಿದ್ದ. ಇದೀಗ ಮತ್ತೊಮ್ಮೆ ಶಾಲೆಯಿಂದ ಬಾಲಕ ನಾಪತ್ತೆಯಾಗಿದ್ದಾನೆ. ಗ್ರಾಮಾಂತರ ಠಾಣಾ ಪೊಲೀಸರು ಬಾಲಕನ ಪತ್ತೆಗೆ ತೀವ್ರ ತನಿಖಾ ಕಾರ್ಯಕೈಗೊಂಡಿದ್ದಾರೆ.