ಮಡಿಕೇರಿ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೈತರ ಡಾಟಾಬೇಸ್ ಯೋಜನೆ ಫೆ.1ರಿಂದ ಪ್ರಾರಂಭವಾಗಲಿದೆ. ಈ ಯೋಜನೆ ಕುರಿತಂತೆ ಈಗಾಗಲೇ ಕೃಷಿ ಸಚಿವರಿಂದ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಜ.8ರಂದು ಪತ್ರ ರವಾನಿಸಲಾಗಿದ್ದು, ಯೋಜನೆಯ ಸ್ಪಷ್ಟ ಯೋಜನಾ ವರದಿ ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ.
ಈ ಯೋಜನೆಯು ರು. 10 ಕೋಟಿ ಅಂದಾಜು ಮೊತ್ತದ ಯೋಜನೆಯಾಗಿದ್ದು, ರಾಜ್ಯದ ಸುಮಾರು 60 ಲಕ್ಷ ರೈತರ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ರೈತರು ತಮ್ಮ ಮೂಲ ದಾಖಲಾತಿ ಹಾಗೂ ಸಂಬಂಧಪಟ್ಟ ದಾಖಲಾತಿ ಹೊಂದಿದ್ದು, ಪಹಣಿ ಪತ್ರಿಕೆಗಳಲ್ಲಿ ಹೆಸರಿಲ್ಲದೆ ಇರುವುದು ಸೇರಿದಂತೆ ಜಮೀನಿಗೆ ಸಂಬಂಧಪಟ್ಟಂತೆ ಇನ್ನೂ ಅನೇಕ ತರಹದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಸಲಹೆಗಳನ್ನು ಪಡೆಯಬಹುದಾಗಿದೆ. ರೈತರು ಸೂಕ್ತ ಸಲಹೆ, ದೂರುಗಳನ್ನು ಫೆ.28ರೊಳಗೆ ಕಳುಹಿಸಿದರೆ ಸ್ಪಷ್ಟ ಯೋಜನೆ ವರದಿ ತಯಾರಿಸಲು ಸಹಕಾರಿಯಾಗುವುದು. ಈ ಯೋಜನೆಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿಯುಳ್ಳ ಕಂಪ್ಯೂಟರ್ ಅಪರೇಟರ್ಗಳಿಗೆ ಮಾರ್ಚ್ನಲ್ಲಿ ಲಿಖಿತ ಪರೀಕ್ಷೆ ನಡೆಸಲು ಉದ್ದೇಶಿಸಲಾದೆ. ಪರೀಕ್ಷಾ ಶುಲ್ಕವಾಗಿ ರು. 200 ಮೊತ್ತದ ಡಿಡಿ, ಸ್ವ ವಿವರದೊಂದಿಗೆ ಕಳುಹಿಸಿಕೊಡಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು ಹಾಗೂ ವರ್ಗ 1ರ ಅಡಿಯಲ್ಲಿ ಬರುವ ಅಭ್ಯರ್ಥಿಗಳು ರು. 50 ಡಿಡಿ ಯೊಂದಿಗೆ ಅರ್ಜಿ ಕಳುಹಿಸಬಹುದು. ಲಿಖಿತ ಪರೀಕ್ಷೆಯ ದಿನಾಂಕವನ್ನು ಅಂಚೆ, ದೂರವಾಣಿ ಮೂಲಕ ತಿಳಿಸಲಾಗುವುದು.
ಕನಿಷ್ಠ ಅರ್ಹತೆ: ದ್ವಿತೀಯ ಪಿಯುಸಿ ಪಾಸಾಗಿರಬೇಕು, ಕಂಪ್ಯೂಟರ್ ಜ್ಞಾನ ಹೊಂದಿರಬೇಕು, ಕನ್ನಡ ಹಾಗೂ ಇಂಗ್ಲಿಷ್ ಭಾಷೆಯನ್ನು ಸ್ಫುಟವಾಗಿ ಬರೆಯುವ ಸಾಮರ್ಥ್ಯ ಉಳ್ಳವರಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ತುಮಕೂರು ಜಿಲ್ಲೆಯ ರಾಜ್ಯ ಮಾಹಿತಿ ಕ್ರೋಢೀಕರಣ ಮತ್ತು ಸಂಪರ್ಕ ಕೋಶದ ಮುಖ್ಯಸ್ಥ ಬಿ.ಎ. ಮಂಜುನಾಥ ಜ್ಯೋತಿನಗರ, ಶಿರಾ- 572137, ಮೊಬೈಲ್ ಸಂಖ್ಯೆ 9900350591 ಸಂಪರ್ಕಿಸಬಹುದು.