ಮಡಿಕೇರಿ: ಗಾಳಿಬೀಡು ಕಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಸಾಮೂಹಿಕ ಶ್ರಮದಾನದ ಮೂಲಕ ಶಾಲಾವರಣ ವ್ಯಾಪ್ತಿ ಶುಚಿಗೊಳಿಸಿದರು.
ಡಿ.7 ಮತ್ತು 8ರಂದು ನಡೆಯಲಿರುವ ಗಾಳಿಬೀಡು ಕಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವದ ಸಂಭ್ರಮ ಗಾಳಿಬೀಡಿನಲ್ಲಿ ಈಗಲೇ ಕಳೆ ಕಟ್ಟಿದೆ.
ನಮ್ಮೂರ ಶಾಲೆ ಎಂಬ ಪ್ರೀತಿಯಿಂದ ಗಾಳಿಬೀಡು ಶಾಲಾ ಮೈದಾನದ ಸುತ್ತ ಬೆಳೆದಿರುವ ಕಾಡು ಮತ್ತು ಕುರುಚಲು ಗಿಡಗಳನ್ನು ಕಡಿದು ಸ್ವಚ್ಛ ಮಾಡುವಲ್ಲಿ ಗ್ರಾಮಸ್ಥರು ತೊಡಗಿಸಿಕೊಂಡಿದ್ದಾರೆ.
ಗಾಳಿಬೀಡು ಗ್ರಾಮಕ್ಕೆ ಪ್ರವೇಶಿಸುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಬೇಲಿ ಸಹಿತ, ಬೆಳೆದು ನಿಂತಿರುವ ಕಳೆ ಗಿಡಗಳನ್ನು ಕಡಿದು ಸ್ವಚ್ಛ ಮಾಡಲಾಗುತ್ತಿದೆ. ಇದರೊಂದಿಗೆ ಶತಮಾನೋತ್ಸವ ಸಮಾರಂಭ ನಡೆಯಲಿರುವ ಶಾಲಾ ಮೈದಾನದಲ್ಲಿ ವೇದಿಕೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.
ಪದಾಧಿಕಾರಿಗಳ ಸಭೆ: ಭಾನುವಾರ ಜರುಗಿದ ಶತಮಾನೋತ್ಸವ ಸಂದರ್ಭದ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಶತಮಾನೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ವೈ.ಡಿ. ಕೇಶವಾನಂದ ಮಾತನಾಡಿ, ಎಲ್ಲಾ ಉಪ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಶತಮಾನೋತ್ಸವ ಆಚರಣೆಗೆ ಸಂಬಂಧಪಟ್ಟಂತೆ ಈಗಾಗಲೇ ಕೈಗೊಂಡಿರುವ ಎಲ್ಲಾ ಕೆಲಸ ಕಾರ್ಯಗಳನ್ನು ಮತ್ತಷ್ಟು ಚುರುಕು ಗೊಳಿಸಬೇಕಾಗಿದೆ. ಸಮಿತಿಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಶತಮಾನೋತ್ಸವ ಯಶಸ್ವಿಗೊಳಿಸಬೇಕೆಂದು ಕೋರಿದರು.
ಸಮಿತಿ ಸದಸ್ಯ ಕೆ.ಆರ್. ಅನಂತ ಕುಮಾರ್ ಈ ಸಂದರ್ಭ ಮಾತನಾಡಿ, ಶಾಲಾ ಶತಮಾನೋತ್ಸವಕ್ಕೆ ಇನ್ನು ಕೇವಲ 20 ದಿನಗಳು ಮಾತ್ರ ಉಳಿದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.
ಶಾಲೆಯ ಹೆಸರಿನ ಹಿನ್ನೆಲೆ: ವೇದಿಕೆಗೆ ಅಮ್ಮನ್ನೂರು ಎಂದು ಹೆಸರಿಸಲಾಗಿದೆ.
ಶಾಲೆ 1913ರ ಪೂರ್ವದಲ್ಲಿ ಅಮ್ಮನ್ನೂರು ಎಂಬಲ್ಲಿ ಮರಳು ರಾಶಿಯಲ್ಲಿ ಅಕ್ಷರಾಭ್ಯಾಸ ಮಾಡುವ ಮೂಲಕ ಈ ಶಾಲೆ ಪ್ರಾರಂಭವಾಗಿರುವುದರಿಂದ ಈ ಹೆಸರು ಇಡಲಾಗಿದೆಯೆಂದು ಅನಂತಕುಮಾರ್ ವಿವರಣೆ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಗುಣ ಮಾತನಾಡಿ, ಶತಮಾನೋತ್ಸವ ತಮ್ಮ ಮನೆಯ ಕಾರ್ಯಕ್ರಮವೆಂದು ಭಾವಿಸಿ ಎಲ್ಲಾ ಚಟುವಟಿಕೆಗಳಲ್ಲಿ ಸಾಮೂಹಿಕವಾಗಿ ಭಾಗವಹಿಸಿ ಶತಮಾನೋತ್ಸವದ ಯಶಸ್ಸಿಗೆ ಕಾರಣರಾಗಬೇಕೆಂದು ಮನವಿ ಮಾಡಿಕೊಂಡರು.
ಸಭೆ ಮತ್ತು ಶ್ರಮದಾನದಲ್ಲಿ ವೈ.ಡಿ. ಸೋಮಯ್ಯ(ಪುಟ್ಟು), ಕೊಂಬಾರನ ಗಣಪತಿ, ಕೊಂಬಾರನ ಧನಂಜಯ, ಶಾಲಾ ಮುಖ್ಯೋಪಾಧ್ಯಾಯ ಸಿ.ಪಿ. ಗಾಯತ್ರಿ ದೇವಿ, ಶಿಕ್ಷಕರಾದ ಬಾಲಕೃಷ್ಣ, ಸಾಲ್ಡಾನಾ, ಗ್ರಟ್ಟ, ನಿವೃತ್ತ ಶಿಕ್ಷಕ ಕುಶಾಲಪ್ಪ ಮೊದಲಾದವರು ಪಾಲ್ಗೊಂಡಿದ್ದರು.
Advertisement