ಗೋಣಿಕೊಪ್ಪಲು: ಕೊಡಗಿನೆಲ್ಲೆಡೆ ಮಳೆಯ ರಭಸ ತೀವ್ರಗೊಂಡಿದ್ದರೂ, ಕುಟ್ಟ ಕೊಡವ ಸಮಾಜದಲ್ಲಿ ಮಳೆಯ ಮಾತು ಬಿಟ್ಟು ಕಕ್ಕಡ ನಮ್ಮೆಯ ವಿವಿಧ ತಿಂಡಿ ತಿನಿಸುಗಳು ರುಚಿಯನ್ನು ಸವಿಯುವುದರಲ್ಲಿಯೇ ಎಲ್ಲರೂ ಮಗ್ನರಾಗಿದ್ದರು.
ಕಕ್ಕಡ ನಮ್ಮೆಗೆ ಆಗಮಿಸಿದ ಎಲ್ಲರಿಗೂ ಭಾನುವಾರ ದಿನದ ವಿಶೇಷ ಆಟಿ ಸೊಪ್ಪು (ಮದ್ದುಸೊಪ್ಪು) ಪಾಯಸವನ್ನು ಉಚಿತವಾಗಿ ನೀಡಿ ಸಮಾಜದ ವತಿಯಿಂದ ಸ್ವಾಗತಿಸಲಾಯಿತು.
ಕುಟ್ಟ ಕೊಡವ ಸಮಾಜ ಆಶ್ರಯದಲ್ಲಿ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಉಸ್ತುವಾರಿಯಲ್ಲಿ ಸುಮಾರು 39 ವಿವಿಧ ಮಳಿಗೆಗಳು ದ್ವಿತೀಯ ವರ್ಷದ ಕಕ್ಕಡ ನಮ್ಮೆಯ ಪ್ರಮುಖ ಆಕರ್ಷಣೆಯಾಗಿತ್ತು.
ಕಳೆದ ಬಾರಿಗಿಂತಲೂ ಈ ಬಾರಿ ಅಧಿಕ ಜನದಟ್ಟಣಿ ಕಂಡು ಬಂತು. ಮಹಿಳೆಯರ ದಂಡೇ ಕುಟ್ಟ ಕೊಡವ ಸಮಾಜದಲ್ಲಿ ಕಂಡು ಬಂತು.
ಉದ್ಘಾಟನೆ: ಕಕ್ಕಡ ನಮ್ಮೆಯನ್ನು ಜಿ.ಪಂ. ಅಧ್ಯಕ್ಷೆ ಶರೀನ್ ಸುಬ್ಬಯ್ಯ ಉದ್ಘಾಟಿಸಿದರು. ಇದೇ ಸಂದರ್ಭ ಕುಟ್ಟ ಕೊಡವ ಸಮಾಜದ ಆಶ್ರಯದಲ್ಲಿ ನೂತನ ಜಿ.ಪಂ. ಅಧ್ಯಕ್ಷೆ ಶರೀನ್ ಸುಬ್ಬಯ್ಯ ಹಾಗೂ ಮಾಜಿ ನಿರ್ದೇಶಕ ಸೂರತ್ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಶಾಲಿನಿ ಕಾರ್ಯಪ್ಪ, ಕೊಂಗಂಡ ಸುರೇಶ್, ಮಚ್ಚಾಮಾಡ ಸುಬ್ರಮಣಿ, ಕೇಚಮಾಡ ವಾಸು ಉತ್ತಪ್ಪ, ತೀತಿರ ಕಬೀರ್, ಚೆಪ್ಪುಡಿರ ಪಾರ್ಥ, ಲೀಲಾ ಅಪ್ಪಣ್ಣ, ಕೋದಂಡ ಲೀಲಾ ಕಾರ್ಯಪ್ಪ, ಬಾಚರಣಿಯಂಡ ಪ್ರಕಾಶ್, ಚೆಕ್ಕೇರ ರಾಬಿನ್ ಕಾರ್ಯಪ್ಪ ಒಳಗೊಂಡಂತೆ ಸಮಾಜದ ಪದಾಧಿಕಾರಿಗಳು ಪಾಲ್ಗೊಂಡರು.
Advertisement