ಶನಿವಾರಸಂತೆ: ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯವಿದ್ದು, ಹೆಚ್ಚಾಗಿ ಕಾರ್ಮಿಕರಿಗೆ ಇದರ ತಿಳುವಳಿಕೆಯ ಅಗತ್ಯವಿದೆ ಎಂದು ಸೋಮವಾರಪೇಟೆ ಸಿವಿಲ್ ನ್ಯಾಯಧೀಶ ಅಬ್ದುಲ್ ಖಾದರ್ ತಿಳಿಸಿದರು.
ಅವರು ಶನಿವಾರಸಂತೆ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಸೋಮವಾರಪೇಟೆ ತಾಲೂಕು ಕಾನೂನು ಸೇವಾ ಸಮೀತಿ, ವಕೀಲರ ಸಂಘ, ಕಾರ್ಮಿಕರ ಇಲಾಖೆ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕರಿಗಾಗಿ ಏರ್ಪಡಿಸಿದ್ದ ಕಾನೂನು ಅರಿವು ಹಾಗೂ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅನ್ನದಾತ ರೈತನಾದರೆ, ನೆಲದ ಮೇಲಿರುವ ಪ್ರತಿಯೊಂದು ಕಾರ್ಯವನ್ನು ಮಾಡುವಾತ ಕಾರ್ಮಿಕನಾಗುತ್ತಾನೆ. ಕಾರ್ಮಿಕರಿದ್ದರೆ ಮಾತ್ರ ನಾವು ಜೀವನ ನಡೆಸಲು ಸಾಧ್ಯವಾಗುತ್ತದೆ. ಕಾರ್ಮಿಕರು ಸಮಾಜದ ಬೆನ್ನೆಲುಬುಗಳಾಗಿ ಕರ್ತವ್ಯವನ್ನು ಮಾಡುತ್ತಾರೆ. ಈ ನಿಟ್ಟಿನಲ್ಲಿ ಕಾರ್ಮಿಕರಿಗೆ ಕಾನೂನಿನ ಅರಿವು ಅಗತ್ಯ ಎಂದರು.
ಪ್ರತಿಯೊಬ್ಬ ಕಾರ್ಮಿಕರು ಕಾರ್ಮಿಕರ ಇಲಾಖೆಯಲ್ಲಿ ತಮ್ಮ ಹೆಸರು, ವಿಳಾಸ ಮುಂತಾದ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು. ಇದರಿಂದ ವಿವಿಧ ಸೌಲಭ್ಯಗಳನ್ನು ಕಾರ್ಮಿಕರ ಇಲಾಖೆ ನೀಡುತ್ತದೆ. ಕಾರ್ಮಿಕರ ಇಲಾಖೆಯಲ್ಲಿ ನೋಂದಣಿ ಮಾಡಿದ್ದ 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಮಾಸಿಕ ರು. 500 ಪಿಂಚಣಿ, ಕಾರ್ಮಿಕರಿಗೆ ಸಲಕರಣೆಗಾಗಿ ಸಹಾಯಧನ ಮುಂತಾದ ಸೌಲಭ್ಯವನ್ನು ನೀಡುತ್ತದೆ. ಕಾರ್ಮಿಕರು ಇದರ ಸೌಲಭ್ಯವನ್ನು ಸದುಪಯೋಗಿಸುವಂತೆ ತಿಳಿಸಿದರು.
ಕಾರ್ಮಿಕರ ಇಲಾಖೆಯ ನಿರೀಕ್ಷಕ ಮಹದೇವಸ್ವಾಮಿ ಮಾತನಾಡಿ, ಕಾರ್ಮಿಕರು ಪ್ರತಿಯೊಬ್ಬರು ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು. ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ ಮುಂತಾದ ಸೌಲಭ್ಯಗಳಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸಾಲ ಸೌಲಭ್ಯ, ಕುಟುಂಬದಲ್ಲಿ ಎರಡು ಹೆಣ್ಣು ಮಕ್ಕಳಿದ್ದರೆ ಅವರ ವಿವಾಹಕ್ಕಾಗಿ ತಲಾ ರು. 50 ಸಾವಿರದಂತೆ ಸಹಾಯಧನ ಹಾಗೂ ಸಾಮನ್ಯ ಕಾಯಿಲೆಗೆ ಶಸ್ತ್ರ ಚಿಕಿತ್ಸೆ ಮುಂತಾದ ಸೌಲಭ್ಯಗಳಿವೆ. ಕಾರ್ಮಿಕರು ಸರ್ಕಾರದಿಂದ ದೊರೆಯುತ್ತಿರುವ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಸಿ. ಚನ್ನಬಸವಯ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸೋಮವಾರಪೇಟೆ ನ್ಯಾಯಲಯದ ಸಿಬ್ಬಂದಿ ಕೆ.ಆರ್. ಕುಸುಮ ಮತ್ತು ಪ್ರದೀಪ್ ಇದ್ದರು.
Advertisement