ಸೋಮವಾರಪೇಟೆ: ಪ್ರಸಕ್ತ ಸಾಲಿನಲ್ಲಿ ಭಾರಿ ಮಳೆ ಹಾಗೂ ಶೀತದಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಖುದ್ದು ಬೇಟಿ ನೀಡಿ, ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಶಾಂತಳ್ಳಿ ಹೋಬಳಿ ವ್ಯಾಪ್ತಿಯ ರೈತರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿಯೇ ಅತ್ಯಧಿಕ ಮಳೆ ಬೀಳುತ್ತಿರುವ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿದ ಮಳೆ ಹಾಗೂ ಶೀತದಿಂದ ಜಾನುವಾರುಗಳು ಸಾಯುತ್ತಿದ್ದು, ಆ ವಿಭಾಗದಲ್ಲಿ ಬತ್ತ, ಶುಂಠಿ ಸೇರಿದಂತೆ ಕೆಲವು ಪ್ರಮುಖ ಬೆಳೆಗಳು ನೀರಿನಲ್ಲಿ ಕೊಳೆಯುತ್ತಿವೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪರಿಹಾರದ ಕ್ರಮಕ್ಕೆ ಮುಂದಾಗಬೇಕಾಗಿದೆ ಎಂದಿದ್ದಾರೆ.
ಈ ಹೋಬಳಿ ವ್ಯಾಪ್ತಿಯಲ್ಲಿ ಬೆಳೆಗಳು ಮಾತ್ರವಲ್ಲ, ಸೇತುವೆಗಳು, ರಸ್ತೆಗಳು ಕೂಡ ಮಳೆ ನೀರಿನಲ್ಲಿ ಮುಳುಗಿದ್ದು, ಕೆಲವೆಡೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಬೆಂಕಳ್ಳಿಯಿಂದ ಕುಡಿಗಾಣಕ್ಕೆ ಹಾದುಹೋಗುವ ಚಿಕ್ಕುಂಡಿ ಹೊಳೆ ಸೇತುವೆ ಕಳೆದ ಒಂದು ತಿಂಗಳಿನಿಂದ ಮುಳುಗಿದ್ದು, ಗ್ರಾಮದ ಸಂಪರ್ಕ ಕಳೆದುಕೊಂಡಿದೆ. ಕುಡಿಗಾಣದಿಂದ ಕೊತ್ತನಳ್ಳಿಗೆ ಹಾದು ಹೋಗುವ ಅಬ್ಬಿ ಹೊಳೆಗೆ ಪ್ರಸಕ್ತ ಸಾಲಿನಲ್ಲಿ ಹೊಸಸೇತುವೆ ನಿರ್ಮಾಣ ಮಾಡಿದ್ದು, ಈ ಸೇತುವೆ ಅಕ್ಕಪಕ್ಕದ ಬತ್ತದ ಗದ್ದೆಗಳು ನೀರಿನಿಂದಾವೃತ್ತವಾಗಿವೆ.
ಕೃಷಿ ಮಾಡಿದ ನಾಟಿ ಗದ್ದೆ ಸಂಪೂರ್ಣ ಹಾನಿಗೊಂಡಿದೆ. ಹೋಬಳಿ ವ್ಯಾಪ್ತಿಯ ಕೆಲವು ಮನೆಗಳು, ಕೊಟ್ಟಿಗೆಗಳು ಕೂಡ ಧರೆಗುರುಳಿದೆ. ಕೆಲವು ಜಾನುವಾರುಗಳು ಹೆಚ್ಚಿದ ಶೀತದಿಂದಾಗಿ ಕೊನೆಯುಸಿರೆಳೆದಿದ್ದರೆ, ಉಳಿದಿರುವ ಜಾನುವಾರುಗಳು ಕೂಡ ಚೈತನ್ಯ ಕಳೆದುಕೊಂಡು ಅನಾರೋಗ್ಯ ಪೀಡಿತವಾಗಿದೆ.
ಕೂಡಲೇ ಜಿಲ್ಲಾಧಿಕಾರಿಗಳು, ತಾಲೂಕಿನ ತಹಸೀಲ್ದಾರರು, ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಜಿಪಂ ಎಂಜಿನಿಯರಿಂಗ್ ಹಾಗೂ ಲೋಕೋಪಯೋಗಿ ಇಲಾಖಾಧಿಕಾರಿಗಳ ತಂಡ ಹೋಬಳಿ ವ್ಯಾಪ್ತಿಯಲ್ಲಿ ಸಂಚರಿಸಿ, ಆಗಿರುವ ನಷ್ಟದ ಬಗ್ಗೆ ವಿವರ ಸಂಗ್ರಹಿಸಿ ಪರಿಹಾರ ನೀಡುವ ಕ್ರಮಕ್ಕೆ ಮುಂದಾಗಬೇಕೆಂದು ಕುಡಿಗಾಣ ಗ್ರಾಮದ ಅಧ್ಯಕ್ಷ ಎಚ್.ಟಿ. ದಿನೇಶ್ ಮತ್ತು ಕುಡಿಗಾಣ, ಕೊತ್ತನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Advertisement