ಮಡಿಕೇರಿ: ಕೊಡಗು ಜಿಲ್ಲೆಗೆ 2014-15ನೇ ಸಾಲಿಗೆ ಯೋಜನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿ ಸೇರಿದಂತೆ ಒಟ್ಟು ರು. 8347.10 ಲಕ್ಷ ಅನುದಾನ ನಿಗದಿಯಾಗಿದ್ದು, ಈ ಕ್ರಿಯಾಯೋಜನೆಗೆ ಜಿಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಈ ಅನುದಾನದ ಪೈಕಿ ಜಿಪಂ ಕಾರ್ಯಕ್ರಮಗಳಿಗೆ ರು. 4324.92 ಲಕ್ಷ, ತಾಲೂಕು ಪಂಚಾಯಿತಿ ಕಾರ್ಯಕ್ರಮಗಳಿಗೆ ರು. 2898.86 ಲಕ್ಷ ಹಾಗೂ ಗ್ರಾಪಂ ಕಾರ್ಯಕ್ರಮಗಳಿಗೆ ರು. 1123.32 ಲಕ್ಷ ಅನುದಾನ ನಿಗದಿಯಾಗಿದೆ. 2013-14ನೇ ಸಾಲಿಗೆ ಜಿಲ್ಲೆಗೆ ಯೋಜನಾ ಕಾರ್ಯಕ್ರಮಗಳಿಗೆ ಒಟ್ಟು ರು. 6657.43 ಲಕ್ಷ ನಿಗದಿಯಾಗಿದ್ದು, ಈ ಪೈಕಿ ರಾಜ್ಯದ ಪಾಲು ರು. 3851.20 ಲಕ್ಷ ಹಾಗೂ ಕೇಂದ್ರದ ಪಾಲು ರು. 2806.23 ಲಕ್ಷ ಆಗಿದೆ.
ಈ ಅನುದಾನದ ಪೈಕಿ ಜಿ.ಪಂ. ಕಾರ್ಯಕ್ರಮಗಳಿಗೆ ರು. 3648.85 ಲಕ್ಷ, ತಾಪಂ ಕಾರ್ಯಕ್ರಮಗಳಿಗೆ ರು. 2898.86 ಲಕ್ಷ ಹಾಗೂ ಗ್ರಾಪಂ ಕಾರ್ಯಕ್ರಮಗಳಿಗೆ ರು. 902.20 ಲಕ್ಷ ನಿಗದಿಯಾಗಿದೆ. ಪ್ರಸ್ತುತ ಕಳೆದ ಸಾಲಿಗೆ ಹೋಲಿಸಿದಾಗ 2014-15ನೇ ಸಾಲಿಗೆ ಒಟ್ಟು ರು. 1689.67 ಲಕ್ಷ ಹೆಚ್ಚುವರಿಯಾಗಿ ಅನುದಾನ ನಿಗದಿಯಾಗಿದೆ. 2014- 15ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮ ಜಿಲ್ಲಾವಾರು ರು. 570.43 ಲಕ್ಷ ನಿಗದಿಗೊಳಿಸಲಾಗಿರುತ್ತದೆ. ಹಿಂದಿನ ಸಾಲಿನ ಅನುದಾನಕ್ಕಿಂತ ಪ್ರಸಕ್ತ ಸಾಲಿಗೆ ಶೇ.18ರಷ್ಟು ಅನುದಾನ ಹೆಚ್ಚಳವಾಗಿದೆ.
2014-15ನೇ ಸಾಲಿಗೆ ಯೋಜನೇತರ ಕಾರ್ಯಕ್ರಮದಡಿ ಒಟ್ಟು ರು. 15910.09 ಲಕ್ಷ ಅನುದಾನ ನಿಗದಿಯಾಗಿದ್ದು, ಇದು ಸಂಪೂರ್ಣ ರಾಜ್ಯದ ಪಾಲಿನ ಅನುದಾನವಾಗಿದೆ. ಈ ಅನುದಾನದ ಪೈಕಿ ಜಿಲ್ಲಾ ಪಂಚಾಯ್ತಿ ಕಾರ್ಯಕ್ರಮಗಳಿಗೆ ರು. 6418.69 ಲಕ್ಷ ತಾಲೂಕು ಪಂಚಾಯ್ತಿ ಕಾರ್ಯಕ್ರಮಗಳಿಗೆ ರು. 9491.40 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. 2013-14ನೇ ಸಾಲಿಗೆ ಯೋಜನೇತರ ಕಾರ್ಯಕ್ರಮಗಳಿಗೆ ಒಟ್ಟು ರು. 14238.24 ಲಕ್ಷ ಅನುದಾನ ನಿಗದಿಯಾಗಿದ್ದು, ಈ ಪೈಕಿ ಜಿಪಂ ಕಾರ್ಯಕ್ರಮಕ್ಕೆ ರು. 6418.69 ಲಕ್ಷ, ತಾಪಂ ಕಾರ್ಯಕ್ರಮಗಳಿಗೆ ರು. 9491.40 ಲಕ್ಷ ಅನುದಾನ ನಿಗದಿಯಾಗಿದ್ದು, ಕಳೆದ ಸಾಲಿಗೆ ಹೋಲಿಸಿದಾಗ ಈ ಸಾಲಿಗೆ ರು. 1671.85 ಲಕ್ಷ ಹೆಚ್ಚುವರಿ ಅನುದಾನ ನಿಗದಿಯಾಗಿದೆ.
ಯೋಜನೆ ಹಾಗೂ ಯೋಜನೇತರ ಸೇರಿಕೊಂಡು ಜಿಲ್ಲೆಗೆ ಒಟ್ಟು ರು. 24257.19 ಲಕ್ಷ ಅನುದಾನ ನಿಗದಿಯಾಗಿದ್ದು ಒಟ್ಟಾರೆಯಾಗಿ ಶೇ.14ರಷ್ಟು ಅನುದಾನ ಹೆಚ್ಚಳವಾಗಿದೆ. ಈ ಪೈಕಿ ರು. 10743.61 ಲಕ್ಷ ಜಿಪಂ ಕಾರ್ಯಕ್ರಮಗಳಿಗೆ ಸಂಬಂಧಿಸಿದ್ದು, ಹಿಂದಿನ ಸಾಲಿಗಿಂತ ಶೇ.14 ರಷ್ಟು ಅನುದಾನ ಹೆಚ್ಚಳವಾಗಿದೆ.
ಯೋಜನಾ ಕಾರ್ಯಕ್ರಮದಲ್ಲಿ ರು. 2633.99 ಲಕ್ಷ ಹಾಗೂ ಯೋಜನೇತರ ಕಾರ್ಯಕ್ರಮದಲ್ಲಿ ಒಟ್ಟು ರು. 11294.59 ಲಕ್ಷ ವೇತನಾಂಶವಾಗಿರುತ್ತದೆ. ಇದು ಒಟ್ಟು ಅನುದಾನದ ಶೇ.73ರಷ್ಟಾಗುತ್ತದೆ. ವೇತನಾಂಶದಲ್ಲಿ ಪ್ರಮುಖವಾಗಿ ಶಿಕ್ಷಣ (ಶೇ.65) ಆರೋಗ್ಯ (ಶೇ.16), ಪಶುಪಾಲನಾ ಇಲಾಖೆ (ಶೇ.3) ಮುಂತಾದ ಇಲಾಖೆಗಳ ವೇತನ ಸೇರಿದೆ.
ಸಾರ್ವಜನಿಕ ಶಿಕ್ಷಣ: ಶಿಕ್ಷಣ ಇಲಾಖೆ ಕಾರ್ಯಕ್ರಮಗಳಿಗೆ ರು. 2448.62 ಲಕ್ಷ 2014-15ನೇ ಸಾಲಿಗೆ ನಿಗಧಿಯಾಗಿದ್ದು, ಜಿಪಂ ಕಾರ್ಯಕ್ರಮಗಳಿಗೆ ಒಟ್ಟಾರೆಯಾಗಿ ರು. 1489.55 ಲಕ್ಷ ನಿಗದಿಪಡಿಸಲಾಗಿದೆ. ಪ್ರಮುಖವಾಗಿ ಸಾರ್ವತ್ರಿಕ ಶಿಕ್ಷಣದ ಉತ್ತೇಜನಕ್ಕಾಗಿ ಅಕ್ಷರ ದಾಸೋಹ ಕಾರ್ಯಕ್ರಮ ಜಾರಿಗೊಳಿಸಿದ್ದು, ಈ ಕಾರ್ಯಕ್ರಮಕ್ಕೆ ರು. 1367.00 ಲಕ್ಷ ಅನುದಾನ ನಿಗದಿಗೊಳಿಸಿದ್ದು ಒಟ್ಟು 52708 ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆಯಲಿದ್ದಾರೆ.
ಸೇರ್ಪಡೆ ಮತ್ತು ಮಾರ್ಪಾಡು ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಪ್ರಾಥಮಿಕ ಶಾಲೆಗಳಿಗೆ ಕಟ್ಟಡ ಒದಗಿಸಲು ಒಟ್ಟು ರು. 35 ಲಕ್ಷ ನಿಗದಿಪಡಿಸಲಾಗಿದೆ. ಪ್ರೌಢಶಾಲೆಗಳಿಗೆ ಅಗತ್ಯ ಸಾಧನ ಸಾಮಗ್ರಿಗಳನ್ನು ಸರಬರಾಜು ಮಾಡಲು ರು. 5 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. ಲೋಕ ಶಿಕ್ಷಣ ಕಾರ್ಯಕ್ರಮಕ್ಕಾಗಿ ರು. 5 ಲಕ್ಷ ಅನುದಾನ ನಿಗದಿಪಡಿಸಲಾಗಿದೆ.
ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ: ಕ್ರೀಡಾ ಇಲಾಖಾ ಕಾರ್ಯಕ್ರಮಗಳಿಗೆ ವಾರ್ಷಿಕವಾಗಿ ರೂ. 104.00 ಲಕ್ಷ ಅನುದಾನ ನಿಗಧಿಪಡಿಸಲಾಗಿದ್ದು ಜಿ.ಪಂ.ಕಾರ್ಯಕ್ರಮಗಳಿಗೆ ರೂ.83.30 ಲಕ್ಷ ನಿಗಧಿಯಾಗಿದೆ.
ಇದರಡಿ ಕ್ರೀಡಾ ಶಾಲೆ ಪೊನ್ನಂಪೇಟೆ ನಿರ್ವಹಣೆ ಮತ್ತು ಇತರೆ ವೆಚ್ಚಗಳಿಗಾಗಿ ರೂ. 35 ಲಕ್ಷ, ಕ್ರೀಡಾಕೂಟ ರ್ಯಾಲಿಗಳಿಗಾಗಿ ರೂ. 25 ಲಕ್ಷ, ಜಿಲ್ಲಾ ಕ್ರೀಡಾಂಗಣ ಮತ್ತು ತಾಲ್ಲೂಕು ಕ್ರೀಡಾಂಗಣ ನಿರ್ವಹಣೆಗಾಗಿ ರೂ. 15 ಲಕ್ಷ ನಿಗಧಿ ಮಾಡಲಾಗಿದೆ. ಗ್ರಾಮೀಣ ಕ್ರೀಡಾ ಕೇಂದ್ರ ಮತ್ತು ಬಯಲು ರಂಗ ಮಂದಿರ ನಿರ್ಮಾಣಕ್ಕಾಗಿ ರೂ. 8 ಲಕ್ಷ ಅನುದಾನ ನಿಗಧಿಯಾಗಿದೆ.
ಕೃಷಿ: ಜಿಲ್ಲೆಯಲ್ಲಿ ಕೃಷಿ ಇಲಾಖೆ ವಿವಿಧ ಕಾರ್ಯಕ್ರಮಗಳಿಗೆ ರು. 84 ಲಕ್ಷ ಅನುದಾನ ನಿಗದಿಗೊಳಿಸಲಾಗಿದ್ದು ಜಿಪಂ ಕಾರ್ಯಕ್ರಮಗಳಿಗೆ ರು. 75.50 ಲಕ್ಷ ಅನುದಾನ ನಿಗದಿಯಾಗಿದೆ.
ಇದರಡಿ ಕೃಷಿ ಯಾಂತ್ರೀಕರಣ ಯೋಜನೆಗಾಗಿ (ಪವರ್ ಟಿಲ್ಲರ್, ಹೈಟೆಕ್ ಕೃಷಿ ಯಂತ್ರೋಪಕರಣ, ಸ್ಪ್ರೇಯರ್ ಮತ್ತು ಪಂಪ್‌ಸೆಟ್ ಇತ್ಯಾದಿಗಳಿಗೆ ಶೇ.50 ಸಹಾಯಧನ) ರು. 39 ಲಕ್ಷ ಅನುದಾನ ನಿಗದಿಪಡಿಸಲಾಗಿದೆ.
ಹನಿ ನೀರಾವರಿ ಯೋಜನೆಗೆ ರು. 5 ಲಕ್ಷ ಅನುದಾನ ನಿಗದಿಯಾಗಿದೆ. ಕೃಷಿ ಕಚೇರಿ ಕಟ್ಟಡಕ್ಕಾಗಿ ರು. 10 ಲಕ್ಷ, ಸಾವಯವ ಗೊಬ್ಬರಗಳು, ಬೇಸಾಯ ಸಂಬಂಧಿತ ಚಟುವಟಿಕೆಗಳು, ಎಣ್ಣೆಕಾಳು ಉತ್ಪಾದನೆ ಮತ್ತು ಇತರೆ ಕಾರ್ಯಕ್ರಮಕ್ಕಾಗಿ ರು. 21.50 ಲಕ್ಷ ನಿಗದಿ ಪಡಿಸಲಾಗಿದೆ.
Advertisement