ಮಡಿಕೇರಿ: ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬೋಧಕೇತರ ನೌಕರರನ್ನು ಖಾಯಂಗೊಳಿಸಬೇಕೆಂದು ರಾಜ್ಯ ವಸತಿ ಶಾಲೆಗಳ ಮತ್ತು ವಸತಿ ನಿಲಯಗಳ ಬೋಧಕೇತರ ಸಿಬ್ಬಂದಿಗಳ ಒಕ್ಕೂಟ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷೆ ರಾಧಾ ಸುಂದರೇಶ್ ಬೋಧಕೇತರ ಸಿಬ್ಬಂದಿಗೆ ಭದ್ರತೆ ಇಲ್ಲದಾಗಿದೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯಾದ್ಯಂತ ಸುಮಾರು 15 ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆ, ಛಬಿಸಿಎಂ ಇಲಾಖೆ, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳಾದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಏಕಲವ್ಯ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಆಶ್ರಮ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ.
ರಜೆ ಹಾಕಿದರೆ ವೇತನ ಕಡಿತಗೊಳಿಸಲಾಗುತ್ತದೆ. ಪಿಎಫ್ ನಿಯಮದಂತೆ 1/2 ಹಣವನ್ನು ಗುತ್ತಿಗೆ ಮಾಲೀಕರು ಪಾವತಿಸುವ ನಿಯಮವಿದ್ದರೂ ಪೂರ್ತಿ ಹಣವನ್ನು ನೌಕರರಿಂದ ಭರಿಸಲಾಗುತ್ತಿದೆ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯ ವೇತನ ನೀಡಲಾಗುತ್ತಿದ್ದು, ಮೂರು ತಿಂಗಳಿಗೊಮ್ಮೆ ವೇತನ ನೀಡಿ ಸತಾಯಿಸಲಾಗುತ್ತಿದೆ. ರಜೆ ಕೇಳಿದರೆ ಕೆಲಸದಿಂದ ತೆಗೆಯುವ ಬೆದರಿಕೆ ಒಡ್ಡುತ್ತಾರೆ ಎಂದು ರಾಧಾ ಸುಂದರೇಶ್ ಆರೋಪಿಸಿದರು.
ಮಾಸಿಕ ಕನಿಷ್ಠ ವೇತನ ನಿಗದಿಯಾಗಿದ್ದರೂ ಮಧ್ಯವರ್ತಿ ಹಾಗೂ ಏಜೆನ್ಸಿಯವರ ಪಾಲು ಕಳೆದು ರು. 4,200 ರಿಂದ 4,650ಗಳನ್ನು ಮಾತ್ರ ನೀಡಲಾಗುತ್ತಿದೆ. ನಿಯಮ ಬಾಹಿರವಾಗಿ ಸೇವಾ ತೆರಿಗೆ, ಪಿಎಫ್, ಕಮಿಷನ್ ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದರೂ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಆರೋಪಿಸಿದ ರಾಧಾ ಸುಂದರೇಶ್ ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ನೌಕರರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ ಡಿ.ಎ, ಕಾರ್ಯಾಧ್ಯಕ್ಷ ಸುಮನ್, ಮಡಿಕೇರಿ ಘಟಕದ ಅಧ್ಯಕ್ಷ ಹರೀಶ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಉಪಕಾರ್ಯದರ್ಶಿ ಸತೀಶ್ ಉಪಸ್ಥಿತರಿದ್ದರು.
Advertisement