ಮಡಿಕೇರಿ: ಮೈಸೂರು ಅರಮನೆ ಆಸ್ತಿಗಳನ್ನು ಉಳಿಸಿಕೊಳ್ಳಲು ಮಹಾರಾಣಿ ಪ್ರಮೋದಾ ದೇವಿ ಹೆಣಗಾಡುತ್ತಿದ್ದರೆ, ರಾಜವಂಶಸ್ಥ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಮಡಿಕೇರಿ ಅರಮನೆಗೇ ಬೀಗ ಜಡಿಯಲು ಹೋಗಿ ಬಂಧನಕ್ಕೆ ಒಳಗಾಗಿದ್ದಾರೆ.
ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದ ಅರಮನೆಯಲ್ಲಿರುವ ಸರ್ಕಾರಿ ಕಚೇರಿಗಳ ಮುಖ್ಯ ದ್ವಾರಕ್ಕೆ ಬೀಗ ಜಡಿದ ಹಿನ್ನೆಲೆಯಲ್ಲಿ ಮೈಸೂರಿನ ಎಚ್.ಸಿ.ಎನ್. ಒಡೆಯರ್ ಅವರನ್ನು ಮಂಗಳವಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ನ.11ರಂದು ಕೋಟೆ ಆವರಣಕ್ಕೆ ಭೇಟಿ ನೀಡಿದ ಎಚ್.ಸಿ.ಎನ್. ಒಡೆಯರ್ ಹಾಗೂ ಇವರ ಸಹೋದರಿ ಸರ್ವೇಶ್ವರಿ ಕೋಟೆ ಆವರಣ, ಅದರೊಳಗಿನ ಅರಮನೆ ತಮಗೆ ಸೇರಿದ್ದು ಎಂದು ವಾದಿಸಿದ್ದರು. ಮೇ 6ರಂದು ಈ ಇಬ್ಬರೂ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕುವ ಮೂಲಕ ವಿವಾದಕ್ಕೊಳಗಾಗಿದ್ದರು. ಮಂಗಳವಾರ ಒಡೆಯರ್ ಮುಖ್ಯ ದ್ವಾರಕ್ಕೆ ಬೀಗ ಹಾಕಿದಾಗ ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿ ಭರತ್ ನಿಯಮಬಾಹಿರ ಕ್ರಮವನ್ನು ಪ್ರಶ್ನಿಸಿ ವಶಕ್ಕೆ ತೆಗೆದುಕೊಂಡರು. ಈ ಸಂಬಂಧ ಜಿಲ್ಲಾಡಳಿತ ದೂರು ನೀಡಿದೆ. 'ಎಚ್.ಸಿ.ಎನ್. ಒಡೆಯರ್, ಮಹಾರಾಜ ಆಫ್ ಕೊಡಗು, ಓನರ್ ಆಫ್ ದಿ ಮರ್ಕೆರಾ ಪ್ಯಾಲೇಸ್' ಹೀಗೆಂದು ಇಂಗ್ಲಿಷ್ನಲ್ಲಿ ಮುದ್ರಿಸಲ್ಪಟ್ಟಿರುವ ದೊಡ್ಡ ಗಾತ್ರದ ಕಂಚಿನ ಬೀಗಗಳು, ಕೋಟೆ ಆವರಣದ ಕೆಲವು ಸರ್ಕಾರಿ ಕಚೇರಿಗಳಲ್ಲಿ ಕಂಡು ಬಂದಿತ್ತು.
'ನ್ಯಾಯಾಲಯದ ಆದೇಶ ನನ್ನ ಬಳಿ ಇದೆ. ಮಡಿಕೇರಿ ಅರಮನೆ ಮತ್ತು ಕೋಟೆ ನಮಗೆ ಸೇರಿದ್ದು, ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರೂ ಕಚೇರಿಗಳನ್ನು ತೆರವುಗೊಳಿಸುತ್ತಿಲ್ಲ' ಎಂದು ಒಡೆಯರ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಯಾರು ಈ ಒಡೆಯರ್?: ಎಚ್.ಸಿ.ಎನ್. ಒಡೆಯರ್ ಮೈಸೂರಿನ ನಿವಾಸಿ, ಉದ್ಯಮಿ. ಈ ಹಿಂದೆ ಕೊಡಗನ್ನು ಆಳಿದ ರಾಣಿ ದೇವಮ್ಮಾಜಿ ಹಾಗೂ ದೊಡ್ಡ ವೀರರಾಜೇಂದ್ರ ಅವರ ಮರಿಮಕ್ಕಳು ನಾವೆಂದು ಹೇಳಿಕೊಳ್ಳುತ್ತಾರೆ.
Advertisement