ಸೋಮವಾರಪೇಟೆ: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ತಮ್ಮ ಶಾಸಕ ಹಾಗೂ ಸಚಿವರ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಸುದೀರ್ಘ ಕಾಲದ ಶಾಸಕರಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜನರೇ ರಂಜನ್‌ಗೆ ಬೆಂಬಲ ನೀಡಿದ್ದು, ಸೋಮವಾರಪೇಟೆಯಲ್ಲಿ ನೆಲಕ್ಕಚ್ಚಿರುವ ಕಾಂಗ್ರೆಸ್‌ನಿಂದ ಅಪ್ಪಚ್ಚು ರಂಜನ್ ಅವರಿಗೆ ಯಾವುದೇ ಪ್ರಶಂಸತಾ ಪತ್ರ ಬೇಕಾಗಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ಕಳೆದ 17 ವರ್ಷಗಳ ಕಾಲ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಸೋಮವಾರಪೇಟೆ ವಿಭಾಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ್ದ ಬ್ಲಾಕ್ ಕಾಂಗ್ರೆಸ್ ಪ್ರಶ್ನೆಗೆ ಈ ರೀತಿ ತಿರುಗೇಟು ನೀಡಿದರು.
ವಿದ್ಯುತ್ ಇಲಾಖೆಯ ಸಮಸ್ಯೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದ ಸಂದರ್ಭ, ಪಕ್ಷದ ಕಾರ್ಯಕ್ರಮವಾದ್ದರಿಂದ ಶಾಸಕರು ಬಂದಿದ್ದಾರೆ. ಸೋಮವಾರಪೇಟೆಯ ವಿದ್ಯುತ್ ಸಮಸ್ಯೆ ಬಗ್ಗೆ ವಿಧಾನ ಸಭೆಯ ಕಲಾಪದಲ್ಲಿ ಪ್ರಶ್ನಿಸಿ ಸಂಬಂಧಿಸಿದ ಇಲಾಖಾ ಸಚಿವರಿಂದ ಉತ್ತರವನ್ನೂ ಪಡೆದಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲೂ ವರದಿ ಪ್ರಕಟವಾಗಿದೆ. ಮಾಧ್ಯಮಗಳನ್ನು ಗಮನಿಸದ ಕಾಂಗ್ರೆಸ್ ಮುಖಂಡರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ತರವಲ್ಲ ಎಂದು ಹೇಳಿದರು.
ಈ ಹಿಂದೆ ಸೋಮವಾರಪೇಟೆಗೆ ಸೇರಿದ್ದ ಆಲೂರುಸಿದ್ದಾಪುರ, ಮಾದಾಪುರ, ಕುಶಾಲನಗರ, ಶನಿವಾರಸಂತೆ ವಿದ್ಯುತ್ ಸರಬರಾಜನ್ನು ವಿಂಗಡಿಸಿ ಪ್ರತಿ ಭಾಗದಲ್ಲೂ ಪ್ರತ್ಯೇಕ ಕೇಂದ್ರಗಳನ್ನು ಸ್ಥಾಪಿಸಿದ ಕೀರ್ತಿ ರಂಜನ್‌ಗೆ ಸಲ್ಲಬೇಕು. ಇದೀಗ ಸೋಮವಾರಪೇಟೆಯ ವಿದ್ಯುತ್ ಕೇಂದ್ರವನ್ನು 100 ಕೆ.ವಿ. ಸಾಮರ್ಥ್ಯಕ್ಕೆ ಏರಿಸಲು ಶಾಸಕರು ಶಿಫಾರಸು ಮಾಡಿದ್ದಾರೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭ ಕೊಡಗಿನಲ್ಲಿ ಲೋಡ್‌ಶೆಡ್ಡಿಂಗ್ ಇರಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಅನಿಯಮಿತವಾಗಿ ಲೋಡ್ ಶೆಡ್ಡಿಂಗ್ ಆಗುತ್ತಿದೆ. ಇದೇ ಕಾಂಗ್ರೆಸ್ ಕೊಡುಗೆ ಎಂದು ಲೇವಡಿ ಮಾಡಿದರು.
ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭವೇ ಕೊಡಗಿಗೆ ಬಿಜೆಪಿ ಸರ್ಕಾರದಿಂದ ಶಾಸಕದ್ವಯರ ಮೂಲಕ ಹರಿದು ಬಂದ ರು. 1,500 ಕೋಟಿ ಅನುದಾನದ ಬಗ್ಗೆ ಶ್ವೇತ ಪತ್ರ ಹೊರಡಿಸಲಾಗಿದೆ. ರಂಜನ್ ಅವಧಿಯಲ್ಲಿ ಸೋಮವಾರಪೇಟೆಯಲ್ಲಿ ಹೈಟೆಕ್ ಮಾರುಕಟ್ಟೆ, ಕಾಂಕ್ರೀಟ್ ರಸ್ತೆ, ಉದ್ಯಾನವನ, ಕೂಡಿಗೆಯಲ್ಲಿ ಸೈನಿಕ ಶಾಲೆ, ಆಲೂರುಸಿದ್ದಾಪುರದಲ್ಲಿ ಐಟಿಐ ಕಾಲೇಜು, ಚಿಕ್ಕಳುವಾರದಲ್ಲಿ ಸ್ನಾತಕೋತ್ತರ ಕೇಂದ್ರ, ಕೊಡ್ಲಿಪೇಟೆ ಬಳಿ ಹೇಮಾವತಿ ನದಿಗೆ ಸೇತುವೆ, ಹಾರಂಗಿ ಉದ್ಯಾನ ವನ, ನಾಲೆ ದುರಸ್ತಿ, ಕೊಡ್ಲಿಪೇಟೆಯಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಸತಿ ಗೃಹ, ಮೊರಾರ್ಜಿ ಶಾಲೆ ಸ್ಥಾಪನೆ, ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಪ್ರಯತ್ನ ಹೀಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದು ರಂಜನ್ ಅಲ್ಲದೆ ಇನ್ಯಾರು ಎಂದು ಮರು ಪ್ರಶ್ನಿಸಿದರು.
ಕೇವಲ ಪ್ರಚಾರಕ್ಕಾಗಿ ಕಾಂಗ್ರೆಸ್‌ನವರು ಶಾಸಕರ ಮೇಲೆ ವೃಥಾ ಆರೋಪ ಮಾಡುವುದನ್ನು ನಿಲ್ಲಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಕೃಷಿ ಹಾನಿ ಪರಿಹಾರ ಬಿಡುಗಡೆಗೆ ಆಗ್ರಹಿಸಲಿ ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಮನುಕುಮಾರ್ ರೈ, ಕೃಷಿ ಮೋರ್ಚಾ ಎಸ್.ಪಿ. ಪೊನ್ನಪ್ಪ ಇದ್ದರು.
Advertisement