ಗೋಣಿಕೊಪ್ಪಲು: ಪೊನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಗೊಬ್ಬರ ಅವ್ಯವಹಾರ ಮಾರಾಟದಲ್ಲಿ ಭಾಗಿಯಾಗಿರುವವರ ವಿರುದ್ಧ ಸಹಕಾರ ಕಾಯ್ದೆಯಡಿ ಬಾಕಿ ವಸೂಲಾತಿಗೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊನ್ನಂಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಡ್ಡಂಡ ಜನಾರ್ದನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008- 2013ರವರೆಗೆ ಗೊಬ್ಬರ ಮಾರಾಟ ವ್ಯವಹಾರದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜೆ. ವಿಕ್ರಮ್‌ರಾಜ್ ಅರಸ್ ಅವರ ವಿಚಾರಣಾ ವರದಿಯನ್ವಯ ರು. 12.91 ಲಕ್ಷ ದುರುಪಯೋಗವಾಗಿರುವುದು ದೃಢಪಟ್ಟಿದೆ ಎಂದರು.
2008ರಿಂದ 2011ರವರೆಗೆ ಗೊಬ್ಬರ ಮಾರಾಟ ಗುಮಾಸ್ತ, ಅಂದಿನ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರು. 1.65 ಲಕ್ಷ ದುರುಪಯೋಗ ಪಡಿಸಿದ್ದಾರೆ. ಇದರಲ್ಲಿ ರು. 53 ಸಾವಿರ ಹಣವನ್ನು ಪಾವತಿಸಿರುವುದರಿಂದ ಬಾಕಿ ಉಳಿದಿರುವ ರು. 1.12 ಲಕ್ಷ ಹಣವನ್ನು ಇವರಿಂದ ವಸೂಲಾತಿ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ.2011ರಿಂದ 2013ರವರೆಗೆ ಸಂಘಕ್ಕೆ ಗೊಬ್ಬರ ಅವ್ಯವಹಾರ ಮಾರಾಟದಲ್ಲಿ ರು. 11.79 ಲಕ್ಷ ದುರುಪಯೋಗವಾಗಿದೆ ಎಂದು ಹೇಳಲಾಗಿದೆ.
2008ರಿಂದ ಸಂಘದ ಗೊಬ್ಬರ ಮಾರಾಟದಲ್ಲಿ ಹಣದ ದುರುಪಯೋಗದ ಬಗ್ಗೆ ನಿರ್ದೇಶಕರಿಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ನಂತರ ಆಯ್ಕೆಗೊಂಡ ಆಡಳಿತ ಮಂಡಳಿ ಈ ಬಗ್ಗೆ ವಾರ್ಷಿಕ ಮಹಾಸಭೆಯಲ್ಲಿ ಸಹಕಾರ ಸಂಘಗಳ ನಿಬಂಧನಾ ಕಾಯ್ದೆ 64ರಡಿ ವಿಚಾರಣೆ ಸಡೆಸುವಂತೆ ಕೋರಿಕೊಂಡ ಮೇರೆಗೆ ಸಹಾಯಕ ಸಂಘಗಳ ಉಪ ನಿಂಬಂಧಕರು ವಿಚಾರಣೆ ನಡೆಸಿದ್ದರು. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೊಬ್ಬರ ಮಾರಾಟ ಗುಮಸ್ತೆಯನ್ನು ವಜಾಗೊಳಿಸಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದವರನ್ನು ಅಮಾನತಿನಲ್ಲಿ ಇಡಲಾಗಿದೆ. ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಸಂಘದ ಮಾಜಿ ಅಧ್ಯಕ್ಷರಿಂದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಆದೇಶದಂತೆ ದುರುಪಯೋಗದ ಮೊತ್ತದ ವಸೂಲಾತಿಗೆ ಆಡಳಿತ ಮಂಡಳಿ 7 ದಿನ ಕಾಲಾವಕಾಶ ನೀಡಿದೆ. ಅದರಂತೆ ಹಣ ಸಂಘಕ್ಕೆ ಮರುಪಾವತಿಯಾಗದಿದ್ದಲ್ಲಿ, ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷೆ ಮೂಕಳೇರ ಸುಮಿತಾ, ನಿರ್ದೇಶಕರಾದ ಅಡ್ಡಂಡ ಜಾಲಿ ತಿಮ್ಮಯ್ಯ, ಅಡ್ಡಂಡ ಸುನಿಲ್ ಸೋಮಯ್ಯ, ಚೀರಂಡ ಕಂದಾ ಸುಬ್ಬಯ್ಯ, ಕಳ್ಳಿಚಂಡ ಕಟ್ಟಿ ಪೂಣಚ್ಚ, ಅಚ್ಚಿಯಂಡ ಬೋಸು, ಕೋಳೇರ ದಿನು, ಕೋಲತಂಡ ಸುವಿನ್ ಮಾಚಯ್ಯ, ಎಚ್. ವಿಠಲ ಹಾಗೂ ಮೂಕಳೇರ ನಂದಾ ಪೂಣಚ್ಚ ಹಾಜರಿದ್ದರು.
Advertisement