ಮೂವರು ಆರೋಪಿಗಳ ಬಂಧನ

Updated on: 

ಮಡಿಕೇರಿ: ಕೊಡಗು ಜಿಲ್ಲೆಯ 9 ಕಡೆಗಳಲ್ಲಿ ಕಳ್ಳತನ ಮಾಡಿದ್ದ ತಮಿಳುನಾಡಿನ ಮೂವರು ಚೋರರನ್ನು ಜಿಲ್ಲಾ ಪೊಲೀಸರು ಬಂಧಿಸಿ, ಬಂಧಿತರಿಂದ ರು. 5.50 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
 ಅಪರಾಧ ಪ್ರಕರಣದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠ ಎಂ.ಎನ್. ಅನುಚೇತ್, ಕೊಯಮುತ್ತೂರಿನ ರತ್ನಗಿರಿ ನಿವಾಸಿಯಾಗಿ ಪ್ರಸ್ತುತ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ನೆಲಕೋಟೆಯಲ್ಲಿರುವ ಜೆ. ರಾಜ (22), ಗೋಣಿಕೊಪ್ಪಲು ಅರವತ್ತೋಕ್ಲು ನಿವಾಸಿ ರಾಜೇಂದ್ರನ್ (33) ಮತ್ತು ದಿಂಡಿಗಲ್‌ನ ಪಲ್ಲಪಟ್ಟಿ ಗ್ರಾಮದ ಪಿ. ರಾಮರ್ (25) ಬಂಧಿತರು ಎಂದು ತಿಳಿಸಿದರು.
 ತಮಿಳುನಾಡಿನಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಬೇಕಾಗಿದ್ದ ಜೆ. ರಾಜ ಮತ್ತು ಪಿ. ರಾಮರ್ ಗೋಣಿಕೊಪ್ಪಲಿನ ಅರವತ್ತೊಕ್ಲು ಗ್ರಾಮಕ್ಕೆ ಮೇ 20ರಂದು ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅದೇ ಗ್ರಾಮದಲ್ಲಿ ತನ್ನ ಬಂಧುಗಳ ಮನೆಯಲ್ಲಿದ್ದ ರಾಜೇಂದ್ರನೊಂದಿಗೆ ಸೇರಿಕೊಂಡು ಜಿಲ್ಲೆಯ ವಿವಿಧೆಡೆಗಳಲ್ಲಿ ಈ ಮೂವರು ಕಳವು ನಡೆಸಿದ್ದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
 ಈ ಕಳ್ಳರು ನಡೆಸಿದ ಮನೆಗಳ್ಳತನ ಪ್ರಕರಣಗಳನ್ನು ಭೇದಿಸಲು ಕುಟ್ಟ ಮತ್ತು ಗೋಣಿಕೊಪ್ಪಲು ಪೊಲೀಸರ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ವಿರಾಜಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಕುಮಾರ್‌ಚಂದ್ರ ನೇತೃತ್ವದ ತಂಡವು ಗುರುವಾರ ಕಾರ್ಯಾಚರಣೆ ನಡೆಸಿದಾಗ ಪೊನ್ನಂಪೇಟೆಯ ಕಾನೂರು ಜಂಕ್ಷನ್‌ನಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಈ ಮೂವರನ್ನು ಬಂಧಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಯಿತು ಎಂದು ಅನುಚೇತ್ ಮಾಹಿತಿ ನೀಡಿದರು.
 ಚಿನ್ನ, ಬೆಳ್ಳಿಯ ಆಭರಣ, ನಗದು, ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಳವು ಮಾಡಿರುವುದು ತನಿಖೆ ವೇಳೆಯಲ್ಲಿ ಬೆಳಕಿಗೆ ಬಂದಿದೆ. ಮೂವರು ಆರೋಪಿಗಳು ವಿವಿಧೆಡೆಗಳಲ್ಲಿ ಕಳವು ಮಾಡಿದ್ದ ಸಾಮಗ್ರಿಗಳನ್ನು  ಗೋಣಿಕೊಪ್ಪಲಿನ ಕೆಲವೆಡೆ ಮಾರಾಟ ಮಾಡಲಾಗಿದ್ದು, ಮತ್ತಷ್ಟು ಕಳವು ಮಾಲುಗಳನ್ನು ತಮ್ಮಲ್ಲೇ ಕಳ್ಳರು ಇರಿಸಿಕೊಂಡಿದ್ದು ಅವೆಲ್ಲವುಗಳನ್ನೆಲ್ಲ ವಶಪಡಿಸಿಕೊಳ್ಳಲಾಗಿದೆ ಎಂದು ಅನುಚೇತ್ ತಿಳಿಸಿದರು.
 ಪ್ರಕರಣವನ್ನು ಭೇದಿಸಿದ ಪೊಲೀಸ್ ಇಲಾಖಾ ತಂಡಕ್ಕೆ ರು. 20 ಸಾವಿರ ಬಹುಮಾನವನ್ನು ಘೋಷಿಸಿರುವುದಾಗಿ  ಅನುಚೇತ್ ಪ್ರಕಟಿಸಿದರು.
ಕಾರ್ಯಾಚರಣೆಯಲ್ಲಿ ಗೋಣಿಕೊಪ್ಪ ಸಿಪಿಐ ಪಿ.ಕೆ. ರಾಜು, ಎಎಸ್‌ಐ ಮರಿಸ್ವಾಮಿ, ಸಿಬ್ಬಂದಿಗಳಾದ ಚಿಟ್ಟಿಯಪ್ಪ, ಎಸ್.ಎಂ. ಸುರೇಶ್, ರಮೇಶ್, ರಧೀಶ, ಹರೀಶ್, ಎ.ಆರ್. ಸುರೇಶ್, ರಂಜಿತ್, ಅಬ್ದುಲ್, ಮಜೀದ್, ಮನು, ಮೋಹನ್, ಅಜಿತ್, ಮಹಮ್ಮದ್ ಆಲಿ ಮತ್ತು ನಾಗೇಶ್ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com