ಮಡಿಕೇರಿ: ಗ್ರಾಮೀಣ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡಿದ ಸಣ್ಣಯ್ಯ ಪಟೇಲ್ ಅವರ ಜನಪದ ಸಾಹಿತ್ಯವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮುನೀರ್ ಅಹಮದ್ ಹೇಳಿದ್ದಾರೆ. ತಾಲೂಕು ಕಸಾಪ ಹಾಗೂ ಕ್ರೆಸೆಂಟ್ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ಮಹದೇವಪೇಟೆಯ ಕ್ರೆಸೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಸಣ್ಣಯ್ಯ ಪಟೇಲ್ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಸಂಪಾಜೆ ಗ್ರಾಮದವರಾದ ಸಣ್ಣಯ್ಯ ಪಟೇಲ್ ಅವರು ಜನಪದ ಸಾಹಿತ್ಯದಲ್ಲಿ ತಮ್ಮದೇ ಆದ ಛಾದಾಪು ಮೂಡಿಸಿದ್ದರು. ಜಿಲ್ಲೆಯಲ್ಲಿ ಜನಪದ ಕಲೆಗಳ ಉಳಿವಿಗೆ ಶ್ರಮಿಸಿದರು. ಸಣ್ಣಯ್ಯ ಪಟೇಲ್ ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಲಾಗಿದ್ದು, ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ನಿಂದ ವಿದ್ಯಾರ್ಥಿಗಳಲ್ಲಿ ಜನಪದ ಸಾಹಿತ್ಯದ ಬಗ್ಗೆ ಪರಿಚಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅನಿತಾ ಎಸ್.ಡಿ ಮಾತನಾಡಿ, ಕೊಡಗಿನ ಗ್ರಾಮೀಣ ಭಾಗದಲ್ಲಿ ವೈವಿಧ್ಯಮಯ ಜನಪದ ಸಂಸ್ಕೃತಿಗಳಿದ್ದು ಜನಪದ ಕಲೆ- ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಉಳಿಸಿ- ಬೆಳೆಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲೆಯ ಮೂಲ ನಿವಾಸಿಗಳು, ಬುಡಗಟ್ಟು ಜನಾಂಗದವರಲ್ಲಿ ಜನಪದ ಆಚಾರ, ವಿಚಾರ ಸಂಸ್ಕೃತಿಗಳನ್ನು ಉಳಿಸುವಂತಾಗಬೇಕು. ಯುವ ಜನಾಂಗಕ್ಕೆ ಜನಪದ ಹಾಡು, ಸಾಹಿತ್ಯ ಕಲೆಗಳ ಬಗ್ಗೆ ಕುತೂಹಲ ಮೂಡಿಸುವಂತಾಬೇಕು ಎಂದು ಅನಿತಾ ತಿಳಿಸಿದರು. ಕ್ರೆಸೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ.ಎಚ್. ಹನೀಫ್ ಮಾತನಾಡಿ, ಬದುಕಿನ ಸಂಸ್ಕೃತಿಯನ್ನು ಗೌರವಿಸುವಂತಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಜೀವನ ಶೈಲಿಗಳು ಬೇರೆ ಬೇರೆಯಾಗಿದ್ದರೂ ಸಮಾಜದಲ್ಲಿ ಸಾಮರಸ್ಯದಿಂದ ಪರಸ್ಪರ ಗೌರವದಿಂದ ಬದುಕಿದಲ್ಲಿ ದೇಶವನ್ನು ಕಟ್ಟಬಹುದು ಎಂದು ತಿಳಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯದರ್ಶಿ ಕಿಶನ್ ಪೂವಯ್ಯ, ಇಂದುಮತಿ, ನೂರುಲ್ ಇಸ್ಲಾಂ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ನಿಜಾಮುದ್ದೀನ್ ಸಿದ್ದೀಕ್, ಕ್ರೆಸೆಂಟ್ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ತಲಾತ್ ಅಂಜುಮ್, ಕೋಶಾಧಿಕಾರಿ ಕೆ.ಎಸ್. ರಮೇಶ್, ಎಂ.ಬಿ. ಜೋಯಪ್ಪ, ಚುಮ್ಮಿ ದೇವಯ್ಯ, ಕಾನೂನು ಇಲಾಖೆಯ ಜಯಪ್ಪ, ಶಾಲಾ ಆಡಳಿತ ಮಂಡಳಿ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.