ಮಡಿಕೇರಿ: ಮಡಿಕೇರಿಯಲ್ಲಿನ ಭಾರತೀಯ ವಿದ್ಯಾಭವನ - ಕೊಡಗು ವಿದ್ಯಾಲಯದಲ್ಲಿ ಎಲ್.ಕೆ.ಜಿ ಮಕ್ಕಳಿಗೆ ವಿದ್ಯಾರಂಭ ದಿನ ಆಯೋಜಿಸಲಾಗಿತ್ತು. ಮೊದಲ ಬಾರಿಗೆ ಶಾಲೆಗೆ ಅಡಿಯಿಡುತ್ತಿರುವ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಸಮಾರಂಭದಲ್ಲಿ ಶಾಲೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಎಂ.ಬಿ. ಬೆಳ್ಯಪ್ಪ, ಸಿ.ಬಿ. ದೇವಯ್ಯ ಮತ್ತು ಉಪ ಪ್ರಾಂಶುಪಾಲೆ ವನಿತ ಚಂಗಪ್ಪ ಹಾಜರಿದ್ದರು. ಶಿಕ್ಷಕಿಯರಾದ ಭಾರತಿ ಬಿದ್ದಪ್ಪ ಮತ್ತು ಗೈನಾ ಸುಬ್ಬಯ್ಯ ನಿರ್ವಹಿಸಿದರು.
ಕಾಡಾನೆ ಹತ್ಯೆ: ಸೆರೆ
ಮಡಿಕೇರಿ: ಕೊಡಗಿನ ಗಡಿಭಾಗ ಕಲ್ಲುಗುಂಡಿಯಲ್ಲಿ ಕಾಡಾನೆ ಹತ್ಯೆ ಮಾಡಿ ದಂತ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 8 ಕೆ.ಜಿ. ತೂಕದ ಎರಡು ಆನೆದಂತ, ಆನೆ ದವಡೆಯ ಎರಡು ಹಲ್ಲು, ಆನೆಯ ಮೂಳೆಯುಳ್ಳ 8 ಚೀಲ ವಶಪಡಿಸಿಕೊಳ್ಳಲಾಗಿದ್ದು ಇದರ ಅಂದಾಜು ಮೌಲ್ಯ ರು. 7 ಲಕ್ಷ ಎಂದು ಅಂದಾಜಿಸಲಾಗಿದೆ. ಕಲ್ಲುಗುಂಡಿ ಮೂಲದ ಹನೀಫ್, ಚರಣ್ , ರಾಜು ಬಂಧಿತರು. ಬಂಧಿತ ಇನ್ನೋರ್ವನ ಹೆಸರು ತಿಳಿದುಬಂದಿಲ್ಲ. ಮಡಿಕೇರಿ ವಲಯ ಅರಣ್ಯ ಜಾಗೃತ ದಳದ ಡಿಎಫ್ಒ ರಾಜಣ್ಣ ನೇತೃತ್ವದಲ್ಲಿ ಖಚಿತ ಮಾಹಿತಿ ಆಧಾರದಲ್ಲಿ ಗುರುವಾರ ರಾತ್ರಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹನೀಫ್ ಈ ಹಿಂದೆಯೂ ಹಲವಾರು ಪ್ರಕರಣದಲ್ಲಿ ಅರಣ್ಯ ಇಲಾಖೆಗೆ ಬೇಕಾದವನಾಗಿದ್ದ. ಈತನ ಮನೆ ಸುತ್ತ ಕಾಡು ಇದ್ದು, ಆನೆಯನ್ನು ಕೊಂದು ದಂತ ಅಪಹರಿಸಲಾಗಿದೆ ಎನ್ನಲಾಗಿದೆ.