ಗೋಣಿಕೊಪ್ಪಲು: ಪಾಲಿಬೆಟ್ಟ- ತಿತಿಮತಿ ವ್ಯಾಪ್ತಿಯ ಕಾಯಂಬೆಟ್ಟ ಕಾಫಿ ತೋಟದಲ್ಲಿ ಸುಮಾರು 20 ವರ್ಷ ಪ್ರಾಯದ ಹೆಣ್ಣಾನೆ ವಿದ್ಯುತ್ ಸ್ಪರ್ಶಗೊಂಡು ಸಾವಿಗೀಡಾದ ಘಟನೆ ಗುರುವಾರ ರಾತ್ರಿ ನಡೆದಿದೆ. ವಿದ್ಯುತ್ ತಂತಿ 11 ಕೆ.ವಿ. ಲೇನ್ ಕೆಳ ಭಾಗದಲ್ಲಿ ಸಡಿಲವಾಗಿ ಜೋತಾಡುತ್ತಿದ್ದು, ಆನೆ ಸಾಗುವ ಸಂದರ್ಭ ಬೆನ್ನಿಗೆ ಸ್ಪರ್ಶಗೊಂಡು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಕೇವಲ 5 ಅಡಿ ಕೆಳಮಟ್ಟದಲ್ಲಿ ವಿದ್ಯುತ್ ಲೇನ್ ಹಾದು ಹೋಗಿರುವುದಾಗಿ ತಿತಿಮತಿ ವಲಯಾರಣ್ಯಾಧಿಕಾರಿ ಗೋಪಾಲ್ ತಿಳಿಸಿದ್ದಾರೆ. ಸ್ಥಳಕ್ಕೆ ಮಡಿಕೇರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜೇ ಗೌಡ ಭೇಟಿ ನೀಡಿ ಪರಿಶೀಲಿಸಿದರು.
ಹೊಟ್ಟೆಯಲ್ಲಿ ಭಾರಿ ಗಡ್ಡೆ
ಮಡಿಕೇರಿ: ಹೊಟ್ಟೆ ನೋವೆಂದು ಬಳಲುತ್ತಾ ವೈದ್ಯರ ಬಳಿ ಬಂದ ಮಹಿಳೆಯ ಹೊಟ್ಟೆಯೊಳಗೆ ಐದುವರೆ ಕೆ.ಜಿ. ತೂಕದ ಬೃಹತ್ ಗೆಡ್ಡೆಯಿರುವುದು ಪತ್ತೆಯಾಗಿದೆ. ಈ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಹೊರತೆಗೆದಿದ್ದಾರೆ. ಕೊಣನೂರು ಗ್ರಾಮದ 55 ವರ್ಷದ ತಾಯವ್ವ ಎಂಬ ಮಹಿಳೆಗೆ ಕೆಲ ವರ್ಷಗಳಿಂದ ತೀವ್ರ ಹೊಟ್ಟೆ ನೋವು ಬಾಧಿಸುತ್ತಿತ್ತು. ಕೊಣನೂರು, ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಹೊಟ್ಟೆ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ತಾಯವ್ವ ಮಡಿಕೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದರು. ತಾಯವ್ವಳನ್ನು ಪರೀಕ್ಷಿಸಿದ ಡಾ.ನವೀನ್ ಕುಮಾರ್ ಅವರಿಗೆ ಈಕೆಯ ಹೊಟ್ಟೆಯಲ್ಲಿ ದೊಡ್ಡ ಗಾತ್ರದ ಗಡ್ಡೆಯಿರುವುದು ತಿಳಿಯಿತು. ರಕ್ತದೊತ್ತಡದಿಂದ ಬಳಲುತ್ತಿದ್ದ ತಾಯವ್ವಳ ರಕ್ತದೊಡ್ಡ ಸಮಸ್ಥಿತಿಗೆ ಬರುವವರೆಗೆ 10 ದಿನ ಕಾದು ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಶಸ್ತ್ರಚಿಕಿತ್ಸೆ ಸಂದರ್ಭ ತಾಯವ್ವಳ ಉದರದಲ್ಲಿ ಐದುವರೆ ಕೆ.ಜಿ. ತೂಕದ ಗಡ್ಡೆ ಪತ್ತೆಯಾಯಿತು. 12 ಇಂಚು ಉದ್ದ, 6 ಇಂಚು ಅಗಲವಿರುವ ಐದೂವರೆ ಕೆ.ಜಿ. ತೂಕದ ಗಡ್ಡೆ ಹೊರತೆಗೆದ ಬಳಿಕ ತಾಯವ್ವ ಈಗ ಆರೋಗ್ಯವಾಗಿದ್ದಾರೆ. ಈ ಹಿಂದೆಯೂ ಡಾ.ಎನ್.ಎಸ್. ನವೀನ್ ಕುಮಾರ್ ಮೂರು ಪ್ರಕರಣಗಳಲ್ಲಿ ರೋಗಿಯ ಹೊಟ್ಟೆಯಿಂದ ಬೃಹತ್ ಗೆಡ್ಡೆಯನ್ನು ಹೊರತೆಗೆದಿದ್ದರು.