ನಾಪೋಕ್ಲು: ಯವಕಪಾಡಿ ಗ್ರಾಮದ ನಾಲ್ಕು ನಾಡು ಅರಮನೆ ಬಳಿ ವಾಸವಿರುವ ಕಾಪಾಳ ಜನಾಂಗದವರಿಗೆ ಸರ್ಕಾರದ ಯಾವ ಸೌಲಭ್ಯಗಳೂ ತಲಪುತ್ತಿಲ್ಲ. ರಸ್ತೆ, ಕುಡಿಯುವ ನೀರು ಹೀಗೆ ಮೂಲಭೂತ ಸಮಸ್ಯೆಗಳೇ ಇವರನ್ನು ತೀವ್ರವಾಗಿ ಕಾಡುತ್ತಿದೆ.
ಕೊಡಗು ಜಿಲ್ಲೆಯ ಯವಕಪಾಡಿ ಗ್ರಾಮದ ನಾಲ್ಕು ನಾಡು ಅರಮನೆ ಬಳಿಯಲ್ಲಿ ಸುಮಾರು 15- 16 ಕಾಪಾಳ ಜನಾಂಗದ ಕುಟುಂಬ ವಾಸಿಸುತ್ತಿದೆ. ಕರ್ನಾಟಕ ರಾಜ್ಯದಲ್ಲಿಯೇ ಈ ಜನಾಂಗ ಇಲ್ಲಿ ಮಾತ್ರ ಇರುವುದು ವಿಶೇಷತೆ.
ಹಿನ್ನೆಲೆ: ಇತಿಹಾಸದಲ್ಲಿ ಹೇಳುವಂತೆ ಕೊಡಗಿನ ವೀರ ರಾಜ ತನ್ನ ರಾಜ್ಯಭಾರದ ಸಮಯದಲ್ಲಿ ಟಿಪ್ಪು ಸುಲ್ತಾನನ ಬೆದರಿಕೆಯಿಂದ ತನ್ನ ಪರಿವಾರವನ್ನು ರಕ್ಷಿಸಿಕೊಳ್ಳಲು ನಾಲ್ಕು ನಾಡು ಬಳಿಯಲ್ಲಿ 1796 ರ ಆಸು ಪಾಸಿನಲ್ಲಿ ಒಂದು ಅರಮನೆಯನ್ನು ನಿರ್ಮಿಸುತ್ತಾನೆ. ಬೆಟ್ಟ ಗುಡ್ಡಗಳಿಂದ ಕೂಡಿದ ಕೊಡಗಿನ ಅತೀ ಎತ್ತರದ ಬೆಟ್ಟ ತಡಿಯಂಡ ಮೋಳ್ನ ಬುಡದಲ್ಲಿಯೇ ಈತ ಅರಮನೆ ಕಟ್ಟಿಸುತ್ತಾನೆ. ಈ ಅರಮನೆಯನ್ನು ನಿರ್ಮಿಸುವ ಸಂದರ್ಭದಲ್ಲಿ ಅರಮನೆಯ ಉಸ್ತುವಾರಿಗೆ ರಾಜ ಪರಿವಾರ ಇದ್ದರೂ ಕಾವಲುಗಾರರನ್ನು ನೇಮಕ ಮಾಡುತ್ತಾನೆ. ಅಂದಿನ ಅರಮನೆ ಕಾವಲುಗಾರರೇ ಇಂದಿನ ಕಾಪಾಳ ಜನಾಂಗ. ಇವರನ್ನು ಅರಮನೆ ಕಾವಲಿಗೆ ನೇಮಿಸಿದ ಕೊಡಗು ರಾಜ ಅರಮನೆ ಪಕ್ಕದಲ್ಲಿ ಇವರಿಗೆ ಸುಮಾರು 60 ಏಕರೆಯಷ್ಟು ಜಾಗವನ್ನು ನೀಡಿ ಜನಾಂಗವನ್ನು ಇಲ್ಲೇ ನೆಲೆಸುವಂತೆ ಮಾಡುತ್ತಾನೆ. ಅದರಂತೆ ಕೊಡಗು ರಾಜ ನೀಡಿದ ಜಮ್ಮಾ ಜಾಗದಲ್ಲಿ ಈ ಜನಾಂಗ ನೆಲೆಸಿರುತ್ತಾರೆ.
ನೀರಿನ ಸಮಸ್ಯೆ: ಕುಡಿಯುವ ನೀರಿಗಾಗಿ ಸರ್ಕಾರ ಇವರಿಗೆ ಒಂದು ಟ್ಯಾಂಕ್ ನಿರ್ಮಿಸಿದ್ದು, ಪೈಪ್ಲೈನ್ಗಳು ಅಳವಡಿಸದೇ ಇರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ. ರಾಜರ ಕಾಲದಲ್ಲಿ ಇವರಿಗೆ ಸುಮಾರು 60ಕ್ಕೂ ಹೆಚ್ಚು ಎಕರೆ ಜಮ್ಮಾ ನೀಡಿದ್ದರು. ಜಾಗ ಒತ್ತುವರಿಯಿಂದ ಇವರು ಸಮಸ್ಯೆ ಎದುರಿಸುತ್ತಿದ್ದಾರೆ. ಕೊಡಗು ರಾಜನ ಕಾಲದಲ್ಲಿ ತಮ್ಮ ಅಜ್ಜಂದಿರ ಸೇವೆಯನ್ನು ಪರಿಗಣಿಸಿ ನಮಗೆ ಜಾಗ ನೀಡಿದ್ದಾರೆ. ಆದರೆ, ಜಾಗದ ದಾಖಲಾತಿಗಳು ಇನ್ನೂ ನಮ್ಮ ಹೆಸರಿಗೆ ಬಂದಿರುವುದಿಲ್ಲ ಎನ್ನುತ್ತಾರೆ ಇಲ್ಲಿಯವರು.
ವಿಶಿಷ್ಟ ಸಂಸ್ಕೃತಿ: ಈ ಜನಾಂಗದವರು ಕೊಡವ ಭಾಷಿಕರಾದರು, ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದವರಾಗಿದ್ದಾರೆ. ಯಾವುದೇ ಇತರ ಭಾಗದಲ್ಲಿ ಈ ಜನಾಂಗ ಇಲ್ಲದಿರುವುದರಿಂದ ತಮ್ಮ ತಮ್ಮಲ್ಲಿ ಇವರು ಮದುವೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇನ್ನಿತರ ಜನಾಂಗದವರೊಂದಿಗೆ ಬೆರೆತು ಬೇರೆ ಜನಾಂಗದವರೊಂದಿಗೆ ಸಂಬಂಧಿಕೆಯನ್ನು ಹೊಂದಿರುತ್ತಾರೆ.
ಮಳೆಗಾಲದಲ್ಲಿ ನಮ್ಮ ಮಕ್ಕಳಿಗೆ ಶಾಲೆಗೆ ಹೋಗಲು ತುಂಬಾ ಕಷ್ಟವಾಗಿದೆ. ಕಲ್ಲು ಬಂಡೆಗಳ ನಡುವೆ ನಡೆದು ಹೋಗಬೇಕು. ಇಲ್ಲಿ ಚಿಕ್ಕದೊಂದು ಮೋರಿ ಇದ್ದು ಮಳೆಗಾಲದಲ್ಲಿ ಇದು ತುಂಬಿ ಹರಿಯುವುದರಿಂದ ತೊಂದರೆಯಾಗುತ್ತದೆ. ಇಲ್ಲಿಗೆ ಸೇತುವೆ, ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಡಿ. ನಾನು ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದರೂ ಅಭಿವೃದ್ಧಿ ವಿಷಯದಲ್ಲಿ ನಮ್ಮ ಮಾತಿಗೆ ಬೆಲೆ ಇಲ್ಲದಂತಾಗಿದೆ.
ಕಾಪಾಳರ ತಮ್ಮಯ್ಯ, ಗಾ.ಪಂ. ಸದಸ್ಯ.
ರಾಜನ ಕಾಲದಲ್ಲಿ ನಮ್ಮ ಜನಾಂಗವನ್ನು ಉಳಿಸಿಕೊಳ್ಳಲು ಜಮ್ಮಾ ಜಾಗ ನೀಡಿರುತ್ತಾರೆ. ಆದರೆ, ಸರ್ಕಾರ ಇದುವರೆಗೂ ನಮ್ಮ ಮೂಲಭೂತ ಸಮಸ್ಯೆಗೆ ಸ್ಪಂದಿಸಿಲ್ಲ.
ಕಾಪಾಳರ ಪೊನ್ನಪ್ಪ