ಸಿದ್ದಾಪುರ: ಇಂಜಿಲಗೆರೆ ಬಳಿ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಇಬ್ಬರು ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾರಾಯಣ (38), ಶಾಂತ (55) ಗಾಯಗೊಂಡ ಕಾರ್ಮಿಕರು. ಮಳೆಯ ನಡುವೆ ಕೆಲಸ ಮಾಡುತ್ತಿದ್ದಾಗ ಆನೆಗಳ ಹಿಂಡೊಂದು ಹಠತ್ತಾಗಿ ದಾಳಿ ನಡೆಸಿದೆ. ಪರಿಣಾಮ ಗಾಯಗೊಂಡ ಇಬ್ಬರು ಕಾರ್ಮಿಕರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವಲಯ ಅರಣ್ಯಾಧಿಕಾರಿ ಉತ್ತಯ್ಯ, ಉಪವಲಯಾಧಿಕಾರಿ ದೇವಯ್ಯ ಸೇರಿದಂತೆ ಬಾಲಾಜಿ, ಉಲ್ಲಾಸ್ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಓಡಿಸಲು ಮುಂದಾಗಿದ್ದಾರೆ.
ಭಯಭೀತರಾದ ಕಾರ್ಮಿಕರು: ಕಳೆದ ಹಲವು ತಿಂಗಳಿನಿಂದ ಗುಯ್ಯ, ಪಳ್ಳಕೆರೆ, ಇಂಜಿಲಗೆರೆ, ಬೀಟೆ ಕಾಡು, ಪುಲಿಹೇರಿ, ಕಲ್ಲುಕೋರೆ, ಆನಂದಪುರ ಸೇರಿದಂತೆ ಮತ್ತಿತರರ ಕಡೆಗಳಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು ರಾಜಾರೋಷವಾಗಿ ಕಾಫಿ ತೋಟಗಳಲ್ಲಿ ಸುತ್ತಾಡುತ್ತಿದೆ. ಇದರಿಂದ ಕಾರ್ಮಿಕರು ಕೆಲಸಕ್ಕೆ ಹೋಗಲು ಭಯಪಡುವಂತಾಗಿದೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: ನಿರಂತರ ಕಾಡಾನೆ ದಾಳಿಯಿಂದಾಗಿ ಈ ಭಾಗದ ಜನ ಭಯಭೀತರಾಗಿದ್ದಾರೆ. ತೋಟಗಳಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಕಾಡಿಗೆ ಓಡಿಸಬೇಕು ಎಂದು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಇಲಾಖೆಯವರು ಕಾಟಾಚಾರಕ್ಕೆ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಕಾಡಾನೆಗಳನ್ನು ಓಡಿಸಿ ಸುಮ್ಮನಾಗುತ್ತಾರೆ. ಕಾಡಾನೆಗಳನ್ನು ಕೂಡಲೇ ಕಾಡಿಗೆ ಓಡಿಸಬೇಕು ಎಂದು ಕಾರ್ಮಿಕ ಮುಖಂಡ ಮಹದೇವ್ ಒತ್ತಾಯಿಸಿದ್ದಾರೆ.