ಗೋಣಿಕೊಪ್ಪಲು: ಇಲ್ಲಿನ ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದ ಗ್ರಾಮದ ರಸ್ತೆಯಲ್ಲಿರುವ ಮುತ್ತಪ್ಪ ದೇವಸ್ಥಾನ ಸಮೀಪದ ಪ್ರಿಯಕರನೊಬ್ಬ ಪ್ರೇಯಸಿಯನ್ನು ಕೊಂದು, ತಾನೂ ವಿಷ ಸೇವಿಸಿದ ಘಟನೆ ಶುಕ್ರವಾರ ಅಪರಾಹ್ನ 3 ಗಂಟೆಗೆ ನಡೆದಿದೆ.
ಮೂಲತಃ ಎಚ್.ಡಿ. ಕೋಟೆ ನಿವಾಸಿ ಚಿಕ್ಕಮ್ಮ (35) ಮೃತ ಮಹಿಳೆ.
ಎಚ್.ಡಿ. ಕೋಟೆಯ ಶ್ರೀನಿವಾಸ ನಾಯಕ್ ಮತ್ತು ಚಿಕ್ಕಮ್ಮ ಪರಸ್ಪರ ಪ್ರೀತಿಸುತ್ತಿದ್ದು, ತನ್ನೊಂದಿಗೆ ಬಂದು ನೆಲೆಸುವಂತೆ ಚಿಕ್ಕಮ್ಮನಿಗೆ ಶ್ರೀನಿವಾಸ ಕೆಲವು ದಿನಗಳಿಂದ ಪೀಡಿಸುತ್ತಿದ್ದು, ಶುಕ್ರವಾರ ಇವರ ಮಧ್ಯೆ ಜಗಳ ಉಂಟಾಗಿ ಶ್ರೀನಿವಾಸ ಚಿಕ್ಕಮ್ಮನ ಕುತ್ತಿಗೆಗೆ ರಿಬ್ಬನ್ ಬಿಗಿದು ಕೊಲೆ ಮಾಡಿದ್ದಾನೆ. ನಂತರ ಶ್ರೀನಿವಾಸ ಕುಂದಕ್ಕೆ ತೆರಳಿ ವಿಷ ಸೇವಿಸಿದ್ದು, ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿರುವುದಾಗಿ ತಿಳಿದುಬಂದಿದೆ.
ಚಿಕ್ಕಮ್ಮನಿಗೆ ಮೊದಲೇ ಬೋರ ನಾಯಕ ಎಂಬಾತನೊಂದಿಗೆ ಮದುವೆಯಾಗಿದ್ದು, ಇವರ ಮಗಳು 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬೋರ ನಾಯಕ ಮತ್ತು ಚಿಕ್ಕಮ್ಮನಿಗೆ ಮನಸ್ತಾಪ ಉಂಟಾಗಿ ಬೋರನಾಯಕ ಮನೆ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ.
ಶಾಲೆಗೆ ತೆರಳಿದ್ದ ಮಗಳು ಮನೆಗೆ ಬಂದು ನೋಡಿದಾಗ ತಾಯಿ ಸತ್ತಿರುವುದು ತಿಳಿದುಬಂದಿದೆ. ಈ ಕುರಿತು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.