ರಾಗಿ, ಜೋಳ ಖರೀದಿ ಕೇಂದ್ರ ಸ್ಥಾಪನೆ

Updated on

ಕ.ಪ್ರ.ವಾರ್ತೆ    ಕೋಲಾರ    ಡಿ.4
ದಲ್ಲಾಳಿಗಳ ಹಾವಳಿಯಿಂದ ರೈತರನ್ನು ಪಾರು ಮಾಡಿ, ರಾಗಿ ಮತ್ತು ಜೋಳವನ್ನು ಖರೀದಿ ಮಾಡಲು ಜಿಲ್ಲೆಯ ಎಲ್ಲಾ ಎಪಿಎಂಸಿಗಳಲ್ಲಿ ಖರೀದಿ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡುವುದರ ಮೂಲಕ ಇವರ ಭದ್ರತೆಗೆ ಮುಂದಾಗಿದೆ. 2013-14 ನೇ ಸಾಲಿನ ಖಾರೀಫ್ ಬೆಳೆಯ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಎಫ್ಎಕ್ಯೂ ಗುಣಮಟ್ಟದ ರಾಗಿ ಮತ್ತು ಬಿಳಿ ಚೋಳವನ್ನು ಇಂದಿನಿಂದಲೇ(ಡಿ.4)ಖರೀದಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ರಾಗಿ ಮತ್ತು ಬಿಳಿ ಜೋಳವನ್ನು ಇಂದಿನಿಂದ ಬರುವ ಮಾರ್ಚ್ 31ರವರೆಗೆ ಖರೀದಿ ಮಾಡಲಾಗುತ್ತದೆ. ಬಂಗಾರಪೇಟೆ, ಮಾಲೂರು, ಮುಳಬಾಗಲು, ಕೋಲಾರ ಮತ್ತು ಶ್ರೀನಿವಾಸಪುರದಲ್ಲಿ ಎಪಿಎಂಸಿ ಯಾರ್ಡ್ನಲ್ಲಿ ರಾಗಿ ಖರೀದಿಸಲಾಗುವುದು.
ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಮತ್ತು ಬಂಗಾರಪೇಟೆ ಕ್ಯಾಸಂಬಳ್ಳಿ ಸೇರಿದಂತೆ ಅವಶ್ಯಕತೆ ಇರುವ ಕಡೆ ರೈತ ಖರೀದಿ ಕೇಂದ್ರಗಳನ್ನು ತೆರೆಯಲು ಸಿದ್ಧ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ನಿಗದಿಪಡಿಸಿರುವ ಗರಿಷ್ಠ ಗುಣಮಟ್ಟದ ರಾಗಿಗೆ ಕ್ವಿಂಟಲ್ಗೆ 1500 ಮತ್ತು ರಾಜ್ಯ ಸರ್ಕಾರದಿಂದ ನೀಡುತ್ತಿರುವ ಪ್ರೋತ್ಸಾಹ ಧನ 300 ರು ಸೇರಿ ಒಟ್ಟು 1800 ರು. ನೀಡಲಾಗುವುದು. ಬಿಳಿ ಜೋಳಕ್ಕೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ಗೆ 1520 ರು. ಮತ್ತು ರಾಜ್ಯ ಸರ್ಕಾರದಿಂದ 280 ಪ್ರೋತ್ಸಾಹ ಧನ ಸೇರಿ ಒಟ್ಟು 1800 ರು.ಗಳನ್ನು ನೀಡುವುದಾಗಿ ವಿವರಿಸಿದರು.
ಜಿಲ್ಲೆಯಲ್ಲಿ ಈ ಬಾರಿ 33 ಸಾವಿರ ಟನ್ಗಾಗಿ ಅವಕ ಕಾಣುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ಬಿಳಿ ಜೋಳ ಬೆಳೆಯುವುದಿಲ್ಲ. ಮೆಕ್ಕೆಜೋಳ ಕೇವಲ 875 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆದಿದ್ದು, ಇದು ಮಾರುಕಟ್ಟೆಗೆ ಬರುವುದು ಕಡಿಮೆ ಎಂದರು.
ಅಕ್ರಮ ದಾಸ್ತಾನು ವಿರುದ್ಧ ಕ್ರಮ:  ರೈತರಿಂದ ಅಕ್ರಮವಾಗಿ ಖರೀದಿಸಿ ದಾಸ್ತಾನು ಮಾಡಿದರೆ  ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ರೈತರು ರಾಗಿಯನ್ನು ಕನಿಷ್ಠ1800 ರು. ಗಳಿಗಿಂತ ಕಡಿಮೆ ಮಾರಾಟ ಮಾಡಬಾರದು ಎಂದು ತಿಳಿಸಿದರು.
ಒಂದು ಬಾರಿ ಉಪಯೋಗಿಸಿದ ಹಾಗೂ ಉಪಯೋಗಿಸಲು ಯೋಗ್ಯವಿರುವ 50 ಕೆ.ಜಿ ಸಾಮರ್ಥ್ಯದ ಖಾಲಿ ಗೋಣಿ ಚೀಲಕ್ಕೆ ರಾಜ್ಯ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ನೀಡಲಾಗುವುದು. ರೈತರಿಂದ ಮಾತ್ರವೇ ಖರೀದಿಸಲಿದ್ದು, ಪೂರ್ಣವಾಗಿ ಒಣಗಿದ ಹಾಗೂ ಪರಿಶುದ್ಧ ಸ್ಥಿತಿಯಲ್ಲಿರುವ ಧಾನ್ಯವನ್ನು  ಖರೀದಿ ಕೇಂದ್ರಗಳಿಗೆ ತರಬೇಕೆಂದರು.
ಸ್ವತಃ ರೈತರೇ ಧಾನ್ಯವನ್ನು ತಂದು ಕೊಡಬೇಕು, ಬೇರೆಯವರ ಮುಖಾಂತರ ಕಳುಹಿಸಬಾರದು. ಹಣವನ್ನು ರೈತರ ಬ್ಯಾಂಕ್ಖಾತೆಗೆ ಜಮ ಮಾಡಲಾಗುತ್ತದೆ. ರೈತರು ತಂದ ರಾಗಿಯನ್ನು ಬೆಳಗ್ಗೆ 10 ರಿಂದ ಸಾಯಂಕಾಲ 4 ರವರೆಗೆ ಖರೀದಿ ಮಾಡಲಿದ್ದು, ಸರ್ಕಾರಿ ರಜಾ ದಿನಗಳಂದು ಖರೀದಿ ಮಾಡುವುದಿಲ್ಲವೆಂದು ತಿಳಿಸಿದರು.
ಕೃಷಿ ಇಲಾಖೆಯ ಉಪನಿರ್ದೇಶಕ ಚಿಕ್ಕಣ್ಣ, ಕೃಷಿಕ ಸಮಾಜದ ಅಧ್ಯಕ್ಷ ವಡಗೂರು ನಾಗರಾಜ್, ರೈತ ಸಂಘದ ಮುಖಂಡರಾದ ಕೆ. ಶ್ರೀನಿವಾಸಗೌಡ, ಅಬ್ಬಣಿ ಶಿವಪ್ಪ ,ಎಪಿಎಂಸಿಯ ಸಹಾಯಕ ನಿರ್ದೇಶಕ ಶಿವಣ್ಣ, ತಾಲೂಕು ಕೃಷಿ ಅಧಿಕಾರಿ ಗಾಯಿತ್ರಿ ಹಾಗೂ ಜಿಲ್ಲೆಯ ಎಲ್ಲಾ ಎಪಿಎಂಸಿಗಳ ಕಾರ್ಯದರ್ಶಿಗಳು, ತಾಲೂಕು ಕೃಷಿ ಅಧಿಕಾರಿಗಳು ಹಾಗೂ ಆಹಾರ ಸರಬರಾಜು ನಿಗಮದ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com