ಕ.ಪ್ರ.ವಾರ್ತೆ , ಕೋಲಾರ , ಡಿ.18
ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಆರೋಗ್ಯ ಇಲಾಖೆಯು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನತೆಯಲ್ಲಿ ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ತಿಳಿಸಿದರು.
ನಗರದ ಹೊರವಲಯದ ಡಿಎಚ್‌ಓ ಕಚೇರಿ ಸಭಾಂಗಣದಲ್ಲಿ ಅವರು ಮಂಗಳವಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ತಂಬಾಕು ಉತ್ಪನ್ನಗಳ ಸೇವನೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನಿಯಂತ್ರಣ ಅಸಾಧ್ಯ: ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕರ ಎಂದು ಹೇಳುವ ಸರ್ಕಾರವೇ ಬೀಡಿ-ಸಿಗರೇಟ್ ಹಾಗೂ ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳದಿದ್ದರೆ ನಿಯಂತ್ರಣ ಅಸಾಧ್ಯವೆಂದರು.
ತಂಬಾಕು ಉತ್ಪನ್ನಗಳ ಸೇವನೆ ಮಾಡುವವರಿಗೆ ದಂಡ ವಿಧಿಸುವುದರಿಂದ ಯಾವುದೇ ಪ್ರಯೋಜನವಿಲ್ಲ, ಜನತೆಯಲ್ಲಿ ಅರಿವು ಮೂಡಿಸಲು ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳು ಮುಂದಾಗಬೇಕೆಂದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಕೆ.ರವಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸುವ ಮೊದಲು ದುಷ್ಪರಿಣಾಮ ಬಗ್ಗೆ ಜನಜಾಗೃತಿ ಮೂಡಿಸಿ ಎಂದು ಅಧಿಕಾರಿ ವರ್ಗಕ್ಕೆ ಸಲಹೆ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆ ನಿಷೇಧಿಸಿದೆ. ಕಾನೂನು ಉಲ್ಲಂಘನೆ ಮಾಡಿದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬುದು ಜನರಿಗೆ ಗೊತ್ತಾದರೆ ಪರಿಸ್ಥಿತಿ ಸುಧಾರಣೆ ಆಗುತ್ತದೆ ಎಂದರು. ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಸಮುದಾಯ ವಿಭಾಗದ ಮುಖ್ಯಸ್ಥರಾದ ಡಾ. ಅನಿಲ್, ತಂಬಾಕಿನಿಂದ ಆಗುವ ಪರಿಣಾಮಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
0.6 ಮಿಲಿಯನ್ ಮಂದಿ ಸಾವು: ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ಚೀನಾ ದೇಶ ಮೊದಲ ಸ್ಥಾನದಲ್ಲಿದ್ದರೆ ಭಾರತ 2ನೇ ಸ್ಥಾನದಲ್ಲಿದೆ. ಭಾರತದಲ್ಲಿ ವಾರ್ಷಿಕ ಉತ್ಪಾದನೆ 7.80 ಲಕ್ಷ ಟನ್ ಉತ್ಪಾದನೆ ಆಗುತ್ತಿದ್ದು ಪ್ರಸ್ತುತ ವಿಶ್ವದಲ್ಲಿ 6 ಮಿಲಿಯನ್ ಜನರು ತಂಬಾಕು ಸೇವನೆಯಿಂದ ಬಳಲುತ್ತಿದ್ದಾರೆ,0.6 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವಿವರಿಸಿದರು.
ತಂಬಾಕು ಸೇವನೆಯಲ್ಲಿ 13 ರಿಂದ 15 ವರ್ಷದೊಳಗಿನವರು ಶೇ. 14.6 ರಷ್ಟು ಮಂದಿ ಇದ್ದರೆ, ಇದರಲ್ಲಿ ಶೇ 19ರಷ್ಟು ಮಂದಿ ಬಾಲಕರು, ಶೇ. 8.3ರಷ್ಟು ಬಾಲಕಿಯರು ಇದ್ದಾರೆ. ಸಿಗರೇಟ್ ಸೇವನೆಯ ಪ್ರಮಾಣ ಶೇ. 4.4ರಷ್ಟಿದ್ದಾರೆಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಮೀಲ್ ಮಾತನಾಡಿ,ಕೋಟ್ಪಾ ಕಾಯ್ದೆ -2003 ರಲ್ಲಿ ಅಪಾಯಕಾರಿ ತಂಬಾಕು ಸೇವನೆಯನ್ನು ನಿಲ್ಲಿಸುವ ಮತ್ತು ತಂಬಾಕು ಉತ್ಪನ್ನಗಳ ತಯಾರಿ ಕಂಪನಿಯ ಮೇಲೆ ಕ್ರಮ ಕೈಗೊಳ್ಳುವ ಕುರಿತು ತಿಳಿಸಿದರು.
ಶಾಲಾ-ಕಾಲೇಜಿನ ಸುತ್ತಮುತ್ತಲ ಪ್ರದೇಶದಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಿದಲ್ಲಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದರು. ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸೀಮೋಲ್ ಮೋಹನ್, ಡಿಎಚ್‌ಒ ಡಾ. ಫೈಯಾಜ್‌ಖಾನ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ರಮೇಶ್‌ಬಾಬು, ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿ ಡಾ.ನಾರಾಯಣಸ್ವಾಮಿ,ವಿಭಾಗೀಯ ಸಂಯೋಜಕ ಮಹಮದ್ ಇದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಜಯಣ್ಣ ನಿರೂಪಿಸಿದರು.
Advertisement