ಟೇಕಲ್: ಸಣ್ಣ ಮತ್ತು ಮಧ್ಯಮ ಹಾಗೂ ಗುಡಿ ಕೈಗಾರಿಕೆಯಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಪ.ಜಾ. ಪಂಗಡ, ಅಂಗವಿಕಲ, ಹಿಂದುಳಿದ ವರ್ಗದವರಿಗೆ ಯಾವುದೇ ಆಧಾರವಿಲ್ಲದೆ 25 ಲಕ್ಷ ಸಾಲ ನೀಡಲಾಗುವುದು ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ಟೇಕಲ್ನಲ್ಲಿ ಮಾಲೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ, ವಕೀಲ ಕೆ.ಎಚ್. ಸೋಮಶೇಖರ್ ಅವರ ಪ್ರಾಯೋಜಕತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರತಿ ಜಿಲ್ಲೆಗೆ ಸಾವಿರ ಜನಕ್ಕೆ 650 ಹಳ್ಳಿಗಳಲ್ಲಿ ಏಪ್ರಿಲ್ ಒಂದರಿಂದ ಸ್ವಂತ ಗುಡಿ ಕೈಗಾರಿಕೆ ನಡೆಸಲು ಸಾಲ ಯೋಜನೆ ರೂಪಿಸಲಾಗಿದೆ ಎಂದರು. ನಾರು ಅಭಿವೃದ್ಧಿ ಮಂಡಳಿ ವತಿಯಿಂದ ತೆಂಗಿನಕಾಯಿಯ ಕಚ್ಚಾವಸ್ತು ಉತ್ಪಾದಿಸಿ ಕೋಲಾರದಲ್ಲಿ ಕೈಗಾರಿಕೆ ಉದ್ದಿಮೆ ತೆರೆಯಲಾಗುವುದೆಂದು ತಿಳಿಸಿದರು. ಮಹಿಳೆಯರಿಗೆ ಅಗರಬತ್ತಿ, ಮೇಣದ ಬತ್ತಿ, ಟೈಲರಿಂಗ್ ಇತರೆ ಸಣ್ಣ ಉದ್ದಿಮೆ ನಡೆಸಲು ಇಂತಹ ಯೋಜನೆಗಳು ಸಹಾಯಕವಾಗುತ್ತದೆ. ತಾಲೂಕಿನಲ್ಲಿ ಬಹುತೇಕ ರಸ್ತೆಗಳ ಕಾಮಗಾರಿಗಳು ಕೇಂದ್ರ ಸರ್ಕಾರದ್ದಾಗಿದ್ದು, ಸ್ಥಳಿಯ ಶಾಸಕರು ಅದನ್ನು ತಪ್ಪು ದಾರಿಗೆ ಏಳೆಯುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರದಿಂದ ರಾಜ್ಯದಲ್ಲಿ ಮೂದಲ ಬಾರಿಗೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು, ಹೋಳೂರು ಹೋಬಳಿಯ, ಗಂಗಣ್ಣಗಾರಣ ಹಳ್ಳಿಯಲ್ಲಿ 10 ಕೋಟಿ ವೆಚ್ಚದಲ್ಲಿ ಏಕಲವ್ಯ ಆಶ್ರಮ ಶಾಲೆ ಪ್ರಾರಂಭಿಸಲಾಗುತ್ತಿದೆ ಎಂದರು. ವಕೀಲ ಕೆ.ಎಚ್. ಸೋಮಶೇಖರ್ ಮಾತನಾಡಿ, ನನ್ನ ಸೇವೆ ರಾಜಕೀಯ ಗಿಮಿಕ್ ಅಲ್ಲ. ನಾನಿರುವ ತನಕ ವರ್ಷದಲ್ಲಿ 2 ಅಥವ 3 ಆರೋಗ್ಯ ಶಿಬಿರವನ್ನು ನುರಿತ ವೈದ್ಯರಿಂದ ನಡೆಸುತ್ತೇನೆ ಎಂದರು.
ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಆಶೋಕ್ಕುಮಾರ್ ಮಾತನಾಡಿ, ಸಚಿವರು ರೇಲ್ವೆ ಖಾತೆ ಹೊಂದಿದ್ದಾಗ ಟೇಕಲ್ನಲ್ಲಿ ತಿರುಪತಿ ಎಕ್ಸ್ಪ್ರೆಸ್ ನಿಲುಗಡೆ ಸೇರಿದಂತೆ ಹಲವು ಯೋಜನೆ ಜಾರಿಗೆ ತಂದರು ಎಂದರು.
ಕೆಪಿಸಿಸಿ ಕಾರ್ಯದರ್ಶಿ ರಘುನಾಥ್, ಸದಸ್ಯ ಎಚ್.ಕೆ. ಗೋವಿಂದಪ್ಪ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸ್ಸೇಗೌಡ, ಕಾಂಗೆಸ್ ಜಿಲ್ಲಾಧ್ಯಕ್ಷ ಅನಿಲ್ಕುಮಾರ್, ಜಿಪಂ ಮಾಜಿ ಸದಸ್ಯ ಆರ್. ರಾಜಣ್ಣ ಮುಂತಾದವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು, ಮಾಸ್ತಿ ಚಂದ್ರರಾಯಪ್ಪ, ಮಾಜಿ ಪುರಸಭಾಧ್ಯಕ್ಷ ಲಕ್ಷ್ಮೀನಾರಾಯಣ್, ವಕೀಲ ಕೃಷ್ಣಪ್ಪ, ಗೋವಿಂದ ಸ್ವಾಮಿ, ಬಿಡಿ ಮಂಜುನಾಥ್, ಆರ್.ವೆಂಕಟೇಶ್ಗೌಡ, ಟೇಕಲ್ ಪ್ರಕಾಶ್, ಆರ್. ಸತೀಶ್, ಮಿಟ್ಟಿಗಾನಹಳ್ಳಿ ರಾಮಕೃಷ್ಣಪ್ಪ, ಉಳ್ಳೇರಹಳ್ಳಿ ವೆಂಕಟೇಶಪ್ಪ ಮುಂತಾದವರು ಇದ್ದರು.