ಕೋಲಾರ: ಜಿಲ್ಲೆಯ ಮಾವು ಬೆಳೆಗಾರರಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಬೆಂಗಳೂರು ನಗರ,ರಾಷ್ಟ್ರೀಯ ಹೆದ್ದಾರಿ 4 ಹಾಗೂ ಹೊರ ರಾಜ್ಯಗಳಲ್ಲಿ ಮಳಿಗೆಗಳನ್ನು ತೆರೆಯಲು ರಾಜ್ಯ ಸರ್ಕಾರ ಗಂಭೀರ ಪ್ರಯತ್ನ ನಡೆಸಿದೆ ಎಂದು ಟಮಕಾದಲ್ಲಿನ ಸರ್ಕಾರಿ ತೋಟಗಾರಿಕೆ ಕಾಲೇಜಿನ ಡೀನ್ ಡಾ.ವಿ.ನಾಚೇಗೌಡ ತಿಳಿಸಿದರು.
ನಗರದ ತೋಟಗಾರಿಕೆ ನರ್ಸರಿಯಲ್ಲಿ ನಡೆಯುತ್ತಿರುವ ಫಲ-ಪುಷ್ಪ ಪ್ರದರ್ಶನದ ಕಡೆ ದಿನವಾದ ಸೋಮವಾರ ಪ್ರಗತಿಯತ್ತ ತೋಟಗಾರಿಕೆ ರೈತರ ಮತ್ತು ತಜ್ಞರೊಂದಿಗೆ ಸಂವಾದದಲ್ಲಿ ಅವರು ಮಾವು ಬೆಳೆಗಾರ ಮುನಿವೆಂಕಟರೆಡ್ಡಿ ಎಂಬುವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾವಿಗೆ ಮಾರುಕಟ್ಟೆ ಕಲ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಸಂಬಂಧ ಇತ್ತೀಚೆಗೆ ಉನ್ನತ ಮಟ್ಟದಲ್ಲಿ ಸಭೆ ನಡೆಸಿ ಮಾರುಕಟ್ಟೆ ವ್ಯವಸ್ಥೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದೆ ಎಂದರು.
ರಾಜ್ಯದಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಶ್ರೀನಿವಾಸಪುರದಲ್ಲಿನ ಎಪಿಎಂಸಿಯಲ್ಲಿ ರೈತರಿಗೆ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರ ಈಗಾಗಲೇ 1 ಕೋಟಿ ಬಿಡುಗಡೆ ಮಾಡಿದೆ. ಮಧ್ಯವರ್ತಿಗಳ ಹಾವಳಿ ನಿಯಂತ್ರಣ ಸೇರಿದಂತೆ ರೈತರ ಅನುಕೂಲಕ್ಕಾಗಿ ಹತ್ತು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿರುವುದರಿಂದ ಈ ಬಾರಿ ಮಾವು ಬೆಳೆಗಾರರಿಗೆ ಹೆಚ್ಚಿನ ಸಹಾಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾವು ಫಸಲು ಅವಕ ಕಾಣುತ್ತಿದ್ದಂತೆ ಹಾಪ್ಕಾಮ್ಸ್ಗಳಲ್ಲಿ ಮಾವು ಮಾರಾಟಕ್ಕೆ ಅವಕಾಶ ನೀಡಲಾಗುವುದು. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಳಿಗೆಗಳನ್ನು ತೆರೆಯುವುದು, ರಾಜಸ್ಥಾನ, ಹರಿಯಾಣ ಸೇರಿದಂತೆ ಇನ್ನಿತರ ರಾಜ್ಯಗಳಲ್ಲೂ ಮಾವು ಮಾರಾಟಕ್ಕಾಗಿ ಮಳಿಗೆ ತೆರೆಯಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.
ಜೈನ್ ಹನಿ ನೀರಾವರಿ ಪದ್ಧತಿ: ಜೈನ್ ಹನಿ ನೀರಾವರಿ ಪದ್ಧತಿ ರೈತರಿಗೆ ವರದಾನವಾಗಿದೆ. ಶೇ.95ರಷ್ಟು ನೀರಿನ ಸದುಪಯೋಗ ಇರುವುದರಿಂದ ರೈತರು ಲಭ್ಯವಿರುವ ನೀರಿನಲ್ಲಿಯೇ ಅಧಿಕ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ ಪಡೆಯಬಹುದು ಎಂದು ಜೈನ್ ಇರಿಗೇಷನ್ ಸಿಸ್ಟಂನ ಬೇಸಾಯ ತಜ್ಞ ಶ್ರೀನಿವಾಸನಾಯ್ಕ ತಿಳಿಸಿದರು.
ಅಧಿಕ ಸಾಂದ್ರತೆಯಲ್ಲಿ ಹಣ್ಣಿನ ಬೆಳೆಗಳ ಬೇಸಾಯದ ಕುರಿತು ವಿಷಯ ಮಂಡಿಸಿದ ಅವರು, ಸಾಮಾನ್ಯ ಪದ್ಧತಿಯಲ್ಲಿ ಮಾವು ಬೆಳೆಯುವುದಕ್ಕಿಂತ ಅಧಿಕ ಸಾಂದ್ರತೆಯಲ್ಲಿ ಮಾವು ಬೆಳೆಯುವುದರಿಂದ ಅಧಿಕ ಇಳುವರಿ ಪಡೆಯಬಹುದು. ಎಲ್ಲ ವಿಧದ ಮಾವಿನ ತಳಿಯನ್ನು ಬೆಳೆದು ಲಾಭ ಗಳಿಸಬಹುದೆಂದು ಹೇಳಿದರು.
ಹಸಿರು ಮನೆ ನಿರ್ಮಿಸುವಾಗ ಸಮತಟ್ಟಾದ ಜಾಗ, ಮಣ್ಣು, ನೀರು, ತೇವಾಂಶ ಹಾಗೂ ಉಷ್ಣಾಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ರೋಗ, ಕೀಟಬಾಧೆ ತಗಲದಂತೆ ಎಚ್ಚರ ವಹಿಸಬೇಕು. ರೆಂಬೆಗಳ ನಿರ್ವಹಣೆಯೂ ಅಷ್ಟೇ ಮುಖ್ಯ ಎಂದು ವಿವರಿಸಿದರು. ಹಸಿರು ಮನೆಯಲ್ಲಿ ಹೂವಿನ ಬೇಸಾಯದ ಕುರಿತು ಪುಣೆಯ ಕೆ.ಎಫ್. ಬಯೋಪ್ಲಾಂಟ್ಸ್ನ ಸೆಂಥಿಲ್ ಕುಮಾರ್ ಮಾಹಿತಿ ನೀಡಿದರು. ತೋಟಗಾರಿಕೆ ಉಪನಿರ್ದೇಶಕ ಕದಿರೇಗೌಡ ಸಂವಾದದಲ್ಲಿ ಇದ್ದರು. ಜಿಲ್ಲೆಯ ವಿವಿಧ ಕಡೆಗಳಿಂದ ರೈತರು ಭಾಗವಹಿಸಿದ್ದರು.