ಬೆಸ್ಕಾಂ ಮುತ್ತಿಗೆ: ಕರವೇ ಶಾಕ್

Updated on: 




ಬಂಗಾರಪೇಟೆ: ಬೇಸಿಗೆ ಕಾಲ ಆರಂಭಕ್ಕೂ ಮುನ್ನವೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡುತ್ತಿರುವುದರ ವಿರುದ್ಧ ಕರವೇ ಕಾರ್ಯಕರ್ತರು ಇಲ್ಲಿನ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹತ್ತುದಿನಗಳಿಂದ ತಾಲೂಕಲ್ಲಿ ಯಾವುದೇ ಸೂಚನೆಯಿಲ್ಲದೆ ಬೇಕಾ ಬಿಟ್ಟಿಯಾಗಿ ವಿದ್ಯುತ್ ಕಡಿತವಾಗುತ್ತಿರುವುದರಿಂದ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಮಳೆಯಿಲ್ಲದೆ ಅಂತರ್ಜಲ ಬತ್ತಿ ಹೋಗಿದ್ದು ಕೊಳವೆ ಬಾವಿಗಳಲ್ಲಿ ಸಿಗುವ ಅಲ್ಪ ಪ್ರಮಾಣದ ನೀರು ಮೇಲೆತ್ತಲೂ ಈಗ ವಿದ್ಯುತ್ ಕಾಟ ಕೊಡುತ್ತಿದ್ದು, ರೈತರು ಕೈಕಟ್ಟಿಕೊಂಡು ಕೂರುವಂತಾಗಿದೆ. ವಿದ್ಯುತ್ ನಂಬಿ ವ್ಯಾಪಾರ ನಡೆಸುತ್ತಿರುವ ವ್ಯಾವಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚುವಂತಾಗಿದೆ.
ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದೆಯೇ ಹೊರತು ಯಾವುದೇ ಬರಪರಿಹಾರ ಕಾಮಗಾರಿಗಳನ್ನು ಕೈಗೊಂಡಿಲ್ಲ. ಕುಡಿಯುವ ನೀರನ್ನು ಮೇಲೆತ್ತಲು ಕೊಳವೆಬಾವಿಗಳಿಗೆ ವಿದ್ಯುತ್ ಇಲ್ಲದಿರುವುದರಿಂದ ಜನರ ಜತೆ ಜಾನುವಾರುಗಳೂ ಪರದಾಡುವಂತಾಗಿದೆ ಎಂದು ಕರವೇ ನಗರ ಅಧ್ಯಕ್ಷ ದೇವೇಗೌಡ ಬೆಸ್ಕಾಂ ಇಲಾಖೆ ಕಾರ್ಯವೈಖರಿ ಬಗ್ಗೆ ಕಿಡಿಕಾರಿದರು.
ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರವಾಗುತ್ತಿರುವುದರಿಂದ ವಿದ್ಯಾರ್ಥಿಗಳು ರಾತ್ರಿ ವೇಳೆ ಓದಲು ಆಗದೆ ಚಿಂತೆಗೀಡಾಗಿದ್ದಾರೆ ಎಂದರು.
ಕೂಡಲೆ ವಿದ್ಯುತ್ ಸಮಸ್ಯೆಯಿಂದ ಜನರಿಗೆ ಮುಕ್ತಿ ಕಾಣಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಕಣಿಂಬೆಲೆ ರಾಮಪ್ರಸಾದ್, ಹರೀಶ್,ಚಲಪತಿ,ಕುಮ್ಮಿ, ಮಂಜು,ಲಿಲಾವತಿ, ಕೌಶಿಕ್,ರಮೇಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com