ಅಪರಿಚಿತರಿಂದ ವ್ಯಕ್ತಿ ಸುಲಿಗೆ

Updated on: 


ಕೋಲಾರ: ರಾಷ್ಟ್ರೀಯ ಹೆದ್ದಾರಿ 4ರ ಹೀರೋ ಹೋಂಡಾ ಷೋ ರೂಂ ಬಳಿ ಸೋಮವಾರ ರಾತ್ರಿ ನಾಲ್ವರು ಅಪರಿಚಿತರು ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ 5 ಸಾವಿರ ನಗದು, ಮೊಬೈಲ್ ಫೋನ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ದೋಚಿ ಪರಾರಿಯಾಗಿದ್ದಾರೆ. ನಗರದ ಪಿ.ಸಿ. ಬಡಾವಣೆ ವಾಸಿ ವೆಂಕಟರಾಮರೆಡ್ಡಿ ಎಂಬವರು ನಡೆದು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದು ದೊಣ್ಣೆಯಿಂದ ವೆಂಕಟರಾಮರೆಡ್ಡಿ ತಲೆ ಮೇಲೆ ಹೊಡೆದು ಅವರ ಬಳಿ ಇದ್ದ 5 ಸಾವಿರ ರು. ನಗದು, ಮೊಬೈಲ್ ಫೋನ್ ಕಸಿದುಕೊಂಡು ಹೋಗಿದ್ದಾರೆ.
ಗುಡಿಸಲಿಗೆ ಬೆಂಕಿ; ವೃದ್ಧೆ ದಹನ
ಶಿಡ್ಲಘಟ್ಟ: ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ವೃದ್ಧೆಯೊಬ್ಬರು ಸಜೀವ ದಹನವಾಗಿರುವ ದಾರುಣ ಘಟನೆ ತಾಲೂಕಿನ ಗ್ರಾಮಾಂತರ ಪೊಲಿಸ್ ಠಾಣಾ ವ್ಯಾಪ್ತಿಯ ಹನುಮಂತಪುರ ಗ್ರಾಮದಲ್ಲಿ ಸಂಭವಿಸಿದೆ.  ಜಯಮ್ಮ(65) ಮೃತ ಮಹಿಳೆ. ಬೆಂಕಿಯ ತೀವ್ರತೆಗೆ ಜಯಮ್ಮ ಸುಟ್ಟು ಕರಕಲಾಗಿದ್ದರು. ಪುತ್ರ ಶ್ರೀನಿವಾಸ್ ಹಾಗೂ ಪುತ್ರಿ ಸುಬ್ಬಲಕ್ಷ್ಮೀ ಎಂಬವರನ್ನು ಹೊಂದಿದ್ದ ಜಯಮ್ಮ ಮನೆ ಬಿಟ್ಟು ಹನುಮಂತಪುರ ಗ್ರಾಮದ ಸರ್ವೆ ನಂ 19ರಲ್ಲಿ ಹಾಕಿಕೊಂಡಿದ್ದ ಗುಡಿಸಲಿನಲ್ಲಿ ವಾಸವಿದ್ದ ಜಯಮ್ಮ ಭಿಕ್ಷೆಬೇಡಿ ಜೀವನ ನಡೆಸುತ್ತಿದ್ದರು.  ವಿಷಯ ತಿಳಿದ ಕೂಡಲೇ ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಅವರ ಸೂಚನೆಯಂತೆ ಉಪ ವಿಭಾಗಾಧಿಕಾರಿ ಶಾಂತಾ, ತಹಸೀಲ್ದಾರ್ ಎಂ.ಕೆ.ರಮೇಶ್, ಬೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಅನ್ಸರ್ ಪಾಷ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು, ಗ್ರಾಮಾಂತರ ಪೋಲಿಸ್ ಠಾಣೆಯ ಪಿಎಸ್‌ಐ ಪಿ.ಬಿ.ಹನುಮಂತಪ್ಪ, ದಿಬ್ಬೂರಹಳ್ಳಿ ಪಿಎಸ್‌ಐ ತಬ್ರೇಆಲಂ ಪಾಷ, ಪುರಪೋಲಿಸ್ ಠಾಣೆಯ ಪುರುಷೋತ್ತಮ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತಳ ಶವಸಂಸ್ಕಾರಕ್ಕಾಗಿ ತಾಲೂಕು ಆಡಳಿತದಿಂದ ಎರಡೂವರೆ ಸಾವಿರ ಪರಿಹಾರ ನೀಡಿದ್ದು ಪೋಲಿಸರು ಮತ್ತು ಬೆಸ್ಕಾಂ ಇಲಾಖೆಯ ಅಧಿಕಾರಿಗಳು ನೀಡುವ ವರದಿಯನ್ನು ಆಧರಿಸಿ ಪರಿಹಾರವನ್ನು ಕಲ್ಪಿಸಲಾಗುವುದೆಂದು ತಹಶೀಲ್ದಾರ್ ಎಂ.ಕೆ.ರಮೇಶ್ ಪತ್ರಿಕೆಗೆ ತಿಳಿಸಿದ್ದಾರೆ.
ಬೆಂಕಿ ಸುತ್ತ ಸಂದೇಹದ ಹುತ್ತ: ಈ ನಡುವೆ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿರುವುದರ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದ್ದು ಗುಡಿಸಲು ವಾಸಿಗಳನ್ನು ತೆರವುಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು ನಿಜಾಂಶ ತನಿಖೆಯಿಂದ ಹೊರ ಬರಬೇಕಾಗಿದೆ.
ತಡವಾಗಿ ಬಂತು: ಸಾಮಾನ್ಯವಾಗಿ ಅಗ್ನಿ ಅನಾಹುತ ಸಂಭವಿಸಿದರೆ ತ್ವರಿತವಾಗಿ ಬರಬೇಕಾಗಿರುವ ಅಗ್ನಿಶಾಮಕ ದಳ ಮಾತ್ರ ತಡವಾಗಿ ಬರುವುದನ್ನು ರೂಢಿ ಮಾಡಿಕೊಂಡಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸಕೋಟೆ ರಸ್ತೆಯ ಮಾರ್ಗದಲ್ಲಿ ಅಗ್ನಿಶಾಮಕದಳ ಕೇಂದ್ರವನ್ನು ಆರಂಭಿಸಲು ಜಾಗವನ್ನು ಕಾಯ್ದರಿಸಲಾಗಿದ್ದರೂ ಅಲ್ಲಿ ಕಾಮಗಾರಿ ನಡೆಯದೆ ತಾಲೂಕಿಗೆ ಅಗ್ನಿಶಾಮಕದಳದ ಸೇವೆ ಮಾತ್ರ ಸಕಾಲದಲ್ಲಿ ಲಭಿಸುತ್ತಿಲ್ಲವೆಂದು ಸಾಮಾನ್ಯ ಜನರ ಆರೋಪವಾಗಿದೆ. ಅಗ್ನಿ ಅನಾಹುತಗಳು ಸಂಭವಿಸಿ ಅಪಾರಹಾನಿ ಉಂಟಾಗುವ ಮೊದಲು ತಾಲೂಕು ಆಡಳಿತ ಅಗ್ನಿಶಾಮಕದಳ ಘಟಕ ತ್ವರಿತವಾಗಿ ಆರಂಭಿಸಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com