ನಗರಸಭೆ 24 ಲಕ್ಷ ಉಳಿತಾಯ ಬಜೆಟ್ ಮಂಡನೆ

Updated on: 




ಕೆಜಿಎಫ್: ನಗರಸಭೆಯಲ್ಲಿ 2013-14ನೇ ಸಾಲಿನ ಆಯವ್ಯಯ ಮಂಡನೆ ಸಭೆಯನ್ನು ನಗರಸಭಾ ಅಧ್ಯಕ್ಷ ಪಿ.ದಯಾನಂದ್ ಅಧ್ಯಕ್ಷತೆಯಲ್ಲಿ ನಗರಸಭಾ ಆವರಣದಲ್ಲಿ ನಡೆಸಲಾಯಿತು. 2013-14ನೇ ಸಾಲಿನ 23,91,500 ಉಳಿತಾಯ ಬಜೆಟ್ ಮಂಡಿಸಲಾಯಿತು.
ಇದೇ ವೇಳೆ ಮಾತನಾಡಿದ ಅಧ್ಯಕ್ಷ ದಯಾನಂದ್ ಅವರು ತಮ್ಮ 5 ವರ್ಷಗಳ ಅವಧಿಯಲ್ಲಿ ಮಾಜಿ ಶಾಸಕ ಹಾಗೂ ನಗರಸಭೆ ಉಪಾಧ್ಯಕ್ಷ ಎಂ.ಭಕ್ತವತ್ಸಲಂ ಅವರ ಮಾರ್ಗದರ್ಶನದಲ್ಲಿ ನಗರದ ಎಲ್ಲಾ 36 ವಾರ್ಡ್‌ಗಳಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಜಾರಿಗೊಳಿಸಿದ್ದರು.
ಸುಮಾರು 100 ಕೋಟಿ ರೂಪಾಯಿಗಳ ಕಾಮಗಾರಿಯನ್ನು ವಿವಿಧ ಅಭಿವೃದ್ದಿ ಸೇರಿದಂತೆ ನಗರ ಹಾಗೂ ಬಿಜಿಎಂಎಲ್ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ದೀಪಗಳು, ಪರಿಶಿಷ್ಟ ಪಂಗಡದವರಿಗೆ ಧನ ಸಹಾಯ ಮತ್ತಿತರ ಕಾರ್ಯಗಳು ತಮ್ಮ ಅವಧಿಯ ಸಾಧನೆಯಾಗಿದೆ ಎಂದರು.
ಮುಂದಿನ ದಿನಗಳಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳಿಗೆ ಅನುಮೋದನೆ ಮಂಡಿಸಲಾಯಿತು.
ಈ ವೇಳೆ ಮಾತನಾಡಿದ ಸದಸ್ಯೆ ತಂಗತಾಯಿ ಕೆಜಿಎಫ್‌ನಲ್ಲಿರುವ ಅಂಬೇಡ್ಕರ್ ಉದ್ಯಾನವನದಲ್ಲಿ ಉದ್ಯಾನವನ್ನು ಅಭಿವೃದ್ದಿ ಪಡಿಸಬೇಕಾಗಿರುವ ನಿಟ್ಟಿನಲ್ಲಿ ಈಗ ಆ ಸ್ಥಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ನಿರ್ಮಿಸುತ್ತಿದ್ದು, ನಗರಸಭೆಯಿಂದ ಅನುಮತಿ ಪಡೆದಿದಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪೌರಾಯುಕ್ತ ವಿ.ಬಾಲಚಂದರ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ನಿರ್ಮಿಸಲು ನಗರಸಭೆಯಿಂದ ಯಾವುದೇ ಅನುಮತಿ ನೀಡಿಲ್ಲ. ಆದರೆ ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಸ್ಥಳ ಗುರುತಿಸಲಾಗಿದೆ ಎಂದರು.
ವಾಗ್ವಾದ: ಉಪಾಧ್ಯಕ್ಷ ಎಂ.ಭಕ್ತವತ್ಸಲಂ ಮಾತನಾಡಿ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಗೊಳ್ಳುವ ಸಂಭವ ಇರುವುದರಿಂದ ನಗರಸಭೆ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಎಲ್ಲಾ ಸದಸ್ಯರುಗಳ ನೇತೃತ್ವದಲ್ಲಿ ಅಡಿಗಲ್ಲು ನೆಡುವ ಕಾರ್ಯಕ್ರಮವನ್ನು ಏರ್ಪಾಟು ಮಾಡಲಾಗಿತ್ತು. ಆದರೆ ಶಾಸಕ ವೈ.ಸಂಪಂಗಿ ರಾಜಕೀಯಲಾಭಕ್ಕಾಗಿ ಇದಕ್ಕೆ ಅಡ್ಡಿಪಡಿಸಿದ್ದಾರೆ.
 ರಾಜ್ಯದ ಮುಖ್ಯಮಂತ್ರಿಗಳು ಪೌರಾಡಳಿತ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಲಿದ್ದು ದಿನಾಂಕವನ್ನು ನಿಗದಿ ಪಡಿಸುವುದಾಗಿ ಸೂಚಿಸಿರುವುದರಿಂದ ಪೌರಾಯುಕ್ತರು ತಮ್ಮ ಕಾರ್ಯಕ್ರಮಕ್ಕೆ ಅನುಮತಿ ನೀಡುತ್ತಿಲ್ಲ. ಎನೇ ಆದರೂ ತಾವು ಬಸ್ ನಿಲ್ದಾಣ ನಿರ್ಮಾಣದ ಪೂಜೆಯನ್ನು ಮಾಡಲಾಗುವುದು ಎಂದರು. ಇದಕ್ಕೆ ಪೌರಾಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪೌರಾಯುಕ್ತರು ಮತ್ತು ಉಪಾಧ್ಯಕ್ಷರ ನಡುವೆ ವಾಗ್ವಾದ ನಡೆಯಿತು.
ಸಭೆಯಲ್ಲಿ 23ಕ್ಕೂ ಹೆಚ್ಚು ನಗರಸಭಾ ಸದಸ್ಯರುಗಳು ಹಾಜರಿದ್ದರು. ನಗರಸಭೆಯಲ್ಲಿ ಇದೇ ಕೊನೆಯ ಸಭೆಯಾಗಿದ್ದರಿಂದ ತಮ್ಮ 5 ವರ್ಷಗಳ ಅವಧಿಯಲ್ಲಿ ನಗರದ ಅಭಿವೃದ್ದಿ ಕಾಮಗಾರಿಗಳಿಗೆ ಸಹಕಾರ ಮತ್ತು ಸ್ಪಂಧಿಸಿದ ಎಲ್ಲಾ ನಗರಸಭೆ ಸದಸ್ಯರಿಗೂ ಮತ್ತು ಅಧಿಕಾರಿಗಳು ಸಿಬ್ಬಂದಿಗೂ ಕೃತಜ್ಞತೆಗಳನ್ನು ಅಧ್ಯಕ್ಷ ಪಿ.ದಯಾನಂದ್ ಅವರು ಸಲ್ಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com