ನಗರಸಭೆ ಹಾಲಿ ಸದಸ್ಯರಿಗೆ ಖುಷಿ, ಮೀಸಲು ಬದಲಾವಣೆ ನಿರೀಕ್ಷಿಸಿದ್ದವರಿಗೆ ಕಸಿವಿಸಿ
- ಪಾ.ಶ್ರೀ. ಅನಂತರಾಮ್
ಕೋಲಾರ: ರಾಜ್ಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಕೋಲಾರ, ಕೆಜಿಎಫ್ ನಗರಸಭೆ ಹಾಗೂ ನಾಲ್ಕು ಪುರಸಭೆಗಳಿಗೆ 2007ರಲ್ಲಿ ನಿಗದಿಯಾಗಿದ್ದ ಮೀಸಲಾತಿಯನ್ನೇ ಮುಂದುವರೆಸಿ ಅಧಿಸೂಚನೆ ಹೊರಡಿಸಲಾಗಿದೆ.
ಕೋಲಾರ ನಗರಸಭೆಯ 35 ವಾರ್ಡುಗಳಿಗೆ ಸಂಬಂಧಪಟ್ಟಂತೆ ವಾರ್ಡುವಾರು ಮೀಸಲಾತಿಯನ್ನು ನಿಗಧಿಪಡಿಸಿರುವುದನ್ನು ನಗರಸಭೆಯ ಸೂಚನಾ ಫಲಕದಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ ಪ್ರಕಟಿಸಲಾಗಿದ್ದು ಹಾಲಿ ಸದಸ್ಯರಿಗೆ ಇದು ಖುಷಿ ನೀಡಿದ್ದರೆ ಮೀಸಲಾತಿ ಬದಲಾವಣೆಯಿಂದ ಲಾಭ ಪಡೆಯಲು ಯತ್ನಿಸಿದ್ದವರಿಗೆ ನಿರಾಸೆಯನ್ನುಂಟು ಮಾಡಿದೆ.
ರಾಜ್ಯ ಸರ್ಕಾರ ನಗರಸಭೆ ಮತ್ತು ಪುರಸಭೆಗಳಿಗೆ ಚುನಾವಣೆ ನಡೆಸಲು ಕಳೆದ ಎರಡು ತಿಂಗಳ ಹಿಂದೆ ಪ್ರಕಟಿಸಿದ್ದ ಮೀಸಲಾತಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಚುನಾವಣೆ ನಡೆಸುವುದಕ್ಕೆ ಹಿಂದೇಟು ಹಾಕಿತ್ತು. ಇದರಿಂದ ಅಸಮಾಧಾನಗೊಂಡ ಚುನಾವಣಾ ಆಯೋಗ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಜತೆಗೆ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರ ವಿರುದ್ಧ ದೂರು ಸಹ ನೀಡಿತ್ತು.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗದ ಪರವಾಗಿ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಆಯೋಗದ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ 2007 ಮೀಸಲಾತಿಯ ಪಟ್ಟಿಯನ್ನು ಪ್ರಕಟಿಸುವಂತೆ ಸೂಚಿಸಿರುವುದರಿಂದ ಜಿಲ್ಲೆಯ ನಗರಸಭೆಗಳು, ಪುರಸಭೆಗಳಲ್ಲಿ ವಾರ್ಡುವಾರು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸಲಾಗಿದೆ.