ಚಿಂತಾಮಣಿ: ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯಾದ್ಯಂತ ಕರೆ ನೀಡಿದ ಬಂದ್ಗೆ ಬೆಂಬಲಿಸಿದ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ನೌಕರರ ಮುಷ್ಕರದಿಂದ ರೋಗಿಗಳ ಪಾಡು ಕೇಳುವರೇ ಇಲ್ಲದೆ ನರಕಯಾತನೆ ಅನುಭವಿಸುವ ಸ್ಥಿತಿ ಕಂಡು ಬಂತು.
ತಾಲೂಕಿನ ವ್ಯಾಪ್ತಿಯ ನೂರಾರು ಬಡ ರೋಗಿಗಳು ಗ್ರಾಮಾಂತರ ಪ್ರದೇಶದಿಂದ ವಿವಿಧ ರೋಗಗಳಿಗೆ ಸಂಬಂಧಿಸಿ ಚಿಕಿತ್ಸೆ ಪಡೆಯಲು ಧರ್ಮಾಸ್ಪತ್ರೆಗೆ ಬಂದಾಗ ರೋಗಿಗಳಿಗೆ ಆತಂಕ ಎದುರಾಯಿತು. ಕಾರಣ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ನೌಕರರು ಸೇರಿ ಆಸ್ಪತ್ರೆಗೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಗೆ ಬೀಗ ಜಡಿದಿದ್ದುದು.
ರೋಗಿಗಳ ಪರದಾಟ ಸಂಬಂಧಿಕರಿಗೆ ಪ್ರಾಣ ಸಂಕಟ...: ವೈದ್ಯರು ಹಾಗೂ ಸಿಬ್ಬಂದಿ ವರ್ಗದ ಮುಷ್ಕರದಿಂದ ಚಿಕಿತ್ಸೆ ದೊರೆಯದೆ ರೋಗಿಗಳು ಪರದಾಡುವ ದೃಶ್ಯ ಕಂಡುಬಂದರೆ ಮತ್ತೊಂದು ಕಡೆ ನಗರಕ್ಕೆ ಹೋದವರು ಸಂಜೆ ಆದರೂ ಬರದೆ ಇರುವ ಬಗ್ಗೆ ಮನಸ್ಸಿಗೆ ನೆಮ್ಮದಿಯಿಲ್ಲದೆ ಪ್ರಾಣ ಸಂಕಟದಿಂದ ರೋಗಿಗಳ ಸಂಬಂಧಿಕರು ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬಯಲಲ್ಲೆ ಮಲಗಿದ ರೋಗಿಗಳು...: ನಡೆಯಲು ಸಾಧ್ಯವಾಗದೆ ಕೈಯಲ್ಲಿ ಕಾಂಚಣವೂ ಇಲ್ಲದೆ ಚಿಕಿತ್ಸೆಗಾಗಿ ಬಂದ ಬಡ ರೋಗಿಗಳು ಗಂಟೆಗಟ್ಟಲೇ ಚಿಕಿತ್ಸೆಗಾಗಿ ಕಾದು ಕಾದು ಬೇಸತ್ತು ಆಸ್ಪತ್ರೆಯ ಹೊರಭಾಗದಲ್ಲೆ ಮಲಗುವ ದುಸ್ಥಿತಿ ಕಂಡುಬಂತು. ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿತನದಿಂದ ಯಾವುದೇ ಮಾಹಿತಿ ನೀಡದೆ ಜನಸಾಮಾನ್ಯರ ಪ್ರಾಣದ ಚತೆ ಚೆಲ್ಲಾಟವಾಡದಂತೆ ಇನ್ನು ಮುಂದಾದರೂ ಎತ್ತೆಚ್ಚುಕೊಂಡು ಬಡವರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಿಕೊಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.