ಚಿಕ್ಕಬಳ್ಳಾಪುರ: ಗುತ್ತಿಗೆದಾರರೊಬ್ಬರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಇಲ್ಲಿನ ಬೆಸ್ಕಾಂ ಕಚೇರಿಯ ಎಂಜಿನಿಯರ್ ಸವಿತಾ ಅವರಿಗೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಸೋಮವಾರ ಶ್ರದ್ಧಾಂಜಲಿ ಸಲ್ಲಿಸಿದರು.
ನಗರದ ವಾಣಿ ಟಾಕೀಸ್ ಮುಂಭಾಗದಲ್ಲಿರುವ ಬೆಸ್ಕಾಂ ಕಚೇರಿಯ ಆವರಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಸವಿತಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಬೆಸ್ಕಾಂ ಇಲಾಖೆಯ ನೌಕರರು ಘಟನೆಗೆ ಕಾರಣರಾದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಹ ಪ್ರತಿಭಟನೆ ನಡೆಸಿದರು.
ಕಾನೂನು ನಿಯಮಾವಳಿಗಳಿಗೆ ಅಧಿಕಾರಿಗಳು ಹೆಚ್ಚು ಒತ್ತು ಕೊಟ್ಟು ಕೆಲಸವನ್ನು ಮಾಡಬೇಕಾಗಿರುತ್ತದೆ. ಇಂತಹ ಸಮಯದಲ್ಲಿ ಕೆಲಸವು ನಿಧಾನವಾಗುತ್ತದೆ ಎಂಬ ಭಾವನೆಯಲ್ಲಿ ವಿನಾ ಕಾರಣ ಅಧಿಕಾರಿಗಳ ಮೇಲೆ ಒತ್ತಡ ಹಾಕುವಂತಹುದು ಹೆಚ್ಚಿಗೆ ಆಗುತ್ತಿದೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದು. ಸುಮ್ಮನೆ ಕಿರುಕುಳ ಕೊಡುವುದನ್ನು ಮಾಡುತ್ತಿದ್ದಾರೆ. ಇದರಿಂದ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಆಗುತ್ತಿಲ್ಲ. ಹಾಗೆಯೇ ರಕ್ಷಣೆಯಿಲ್ಲದೇ ತೊಂದರೆಯನ್ನು ಅನುಭವಿಸಬೇಕಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಅಧಿಕಾರಿಗಳು ಸೂಕ್ತ ರಕ್ಷಣೆಯಲ್ಲಿ ಕಾರ್ಯ ನಿರ್ವಹಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.
ಗುತ್ತಿಗೆದಾರರೊಬ್ಬರು ಎಂಜಿನಿಯರ್ ಸವಿತಾರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡಿರುವುದು ಖಂಡನೀಯ. ಈ ಬಗ್ಗೆ ಸವಿತಾರವರು ಡೆತೆನೋಟ್ ಬರೆದಿಟ್ಟಿದ್ದು ಸಂಬಂಧಪಟ್ಟವರನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರಿಗೆ ಶಿಕ್ಷೆಯನ್ನು ಕೊಡಿಸಿ ಮೃತ ಸವಿತಾರವರಿಗೆ ನ್ಯಾಯ ಒದಗಿಸಬೇಕೆಂದರು. ಅಲ್ಲದೇ ಸವಿತಾರವರ ಕುಟುಂಬಕ್ಕೆ ನೋವನ್ನು ತಡೆದುಕೊಳ್ಳುವ ಶಕ್ತಿ, ಸವಿತಾರವರ ಆತ್ಮಕ್ಕೆ ಶಾಂತಿಯನ್ನು ಕೊಡಲಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಬೆಸ್ಕಾಂ ಇಲಾಖೆಯ ಎಇಇ ರಮೇಶ್, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಬೆಸ್ಕಾಂ ಇಲಾಖೆಯ ನೌಕರರ ಸಂಘದ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಮುಂತಾದವರು ಭಾಗವಹಿಸಿದ್ದರು.