ಎಕ್ರೆಗೆ 1 ಕೋಟಿ ಪರಿಹಾರ ಕೊಡಿ

Updated on: 

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಕಸಬಾ ಹೋಬಳಿಗೆ ಸೇರಿದ ಜಕ್ಕಸಂದ್ರ ಗ್ರಾಮದಲ್ಲಿ ಕೈಗಾರಿಕಾಭಿವೃದ್ಧಿಗಾಗಿ ರೈತರಿಂದ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಕೃಷಿ ಭೂಮಿಗೆ ಎಕರೆಗೆ 80 ಲಕ್ಷ ದಿಂದ 1 ಕೋಟಿ ರು. ಪರಿಹಾರ ನೀಡಲು ರೈತರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಕ್ಕಸಂದ್ರ ಗ್ರಾಮದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಎರಡನೇ ಹಂತದಲ್ಲಿ 627.18 ಎಕರೆ ಭೂಮಿಯನ್ನು ರೈತರಿಂದ ಸ್ವಾಧೀನಕ್ಕೆ ಪಡೆಯಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಭೂ ಪರಿಹಾರ ನಿರ್ಧರಣಾ ಸಲಹಾ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಆಸಕ್ತಿ ತೋರಿದೆ, ಈಗಾಗಲೇ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ ಕಾರ್ಯ ಆರಂಭವಾಗಿದೆ. ಆ ಭಾಗದ ಖಾತೆದಾರರಿಗೆ ರಾಜ್ಯ ಸರ್ಕಾರ ತೃಪ್ತಿಯಾಗುವ ರೀತಿಯಲ್ಲೇ ಪರಿಹಾರ ಘೋಷಣೆ ಮಾಡಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿದೆ. ವೇಮಗಲ್ ಕೈಗಾರಿಕಾ ಪ್ರದೇಶದಲ್ಲೂ ರೈತರ ಭೂಮಿಗೆ ಎಕರೆಗೆ 35 ಲಕ್ಷ ರು. ನೀಡಲು ಸರ್ಕಾರ ನಿರ್ಧರಿಸಿದೆ. ಇದೇ ರೀತಿಯಲ್ಲಿ ಜಕ್ಕಸಂದ್ರ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೂ ಸೂಕ್ತ ಪರಿಹಾರ ನೀಡುವಂತೆ ತಾವು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ವೇಮಗಲ್ ಮಾದರಿ ಪರಿಹಾರ ಬೇಕು: ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ರೈತರು, ನರಸಾಪುರ ಮತ್ತು ವೇಮಗಲ್ ಮಾದರಿಯಲ್ಲಿ ನಮಗೆ 30 ರಿಂದ 35 ಲಕ್ಷ ರು. ಪರಿಹಾರ ನೀಡಿದರೆ ಒಪ್ಪುವುದಿಲ್ಲ, ರೈತರು ಅದರಲ್ಲೂ ಜಕ್ಕಸಂದ್ರ 101 ಮತ್ತಿತರ ಸರ್ವೆ ನಂಬರ್‌ಗಳ ವ್ಯಾಪ್ತಿಯಲ್ಲಿರುವ ಕೃಷಿ ಭೂಮಿಯನ್ನು ನಂಬಿ ಜೀವನ ಸಾಗಿಸುತ್ತಿರುವ ಶೇ.80 ರಷ್ಟು ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಣ್ಣ ರೈತರಿಗೆ ಹೆಚ್ಚಿನ ಪರಿಹಾರ ನೀಡಲೇಬೇಕೆಂದು ಸಭೆಯಲ್ಲಿ ಹಾಜರಿದ್ದ ರೈತ ಮುಖಂಡ ಅಶ್ವತ್ಥರೆಡ್ಡಿ, ಮಾಜಿ ಶಾಸಕ ಎ. ನಾಗರಾಜು ಆಗ್ರಹಿಸಿದರು.
ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಕನಿಷ್ಠ ಒಂದು ಎಕರೆಗೆ 80 ಲಕ್ಷದಿಂದ 1 ಕೋಟಿ ರು. ಪರಿಹಾರ, ರೈತ ಕುಟುಂಬದ ವಿದ್ಯಾವಂತರಿಗೆ ಕೈಗಾರಿಕೆಗಳಲ್ಲಿ ಉನ್ನತ ದರ್ಜೆಯ ಹುದ್ದೆ ಕಲ್ಪಿಸಬೇಕೆಂದು ರೈತರ ಪರವಾಗಿ ವಕಾಲತ್ತು ವಹಿಸಲು ಬಂದಿದ್ದ ಮುಖಂಡರು ಒತ್ತಾಯಿಸಿದಾಗ ರೈತರು ಧ್ವನಿಗೂಡಿಸಿದರು.
ಪ್ರಸ್ತುತ ಜಕ್ಕಸಂದ್ರ, ಮಿಂಡಹಳ್ಳಿ, ಕರಿನಾಯಕನಹಳ್ಳಿ, ಅಪ್ಪಸಂದ್ರ, ಅಜ್ಜಪ್ಪನಹಳ್ಳಿ ಮುಂತಾದ ಕಡೆ ರೈತರ ಭೂಮಿ ಎಕರೆಗೆ 80 ಲಕ್ಷದಿಂದ 1ಕೋಟಿ ರು. ವರೆಗೆ ಮಾರಾಟವಾಗುತ್ತಿದೆ. ಸರ್ಕಾರ ಕೈಗಾರಿಕಾ ಅಭಿವೃದ್ಧಿಗೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ನೀಡುವುದು ಸೂಕ್ತ ನೀಡುವ ಮೂಲಕ ರೈತರ ಬದುಕಿಗೆ ಆಸರೆಯಾಗಬೇಕೆಂದು ರೈತರ ಪರವಾಗಿ ಬಂದಿದ್ದ ಮಿಂಡಹಳ್ಳಿ ಚಂದ್ರಶೇಖರ್, ಕರಿನಾಯಕರನಹಳ್ಳಿ ಆನಂದರೆಡ್ಡಿ, ಎಂ.ವಿ. ಸೋಮಶೇಖರ್, ಜೆಡಿಎಸ್ ಮುಖಂಡ ಕೋಡಿಹಳ್ಳಿ ಮಂಜುನಾಥ್ ರೈತರ ಅಪೇಕ್ಷೆಯಂತೆ ಎಕರೆಗೆ 80 ಲಕ್ಷ ರು.ಗಳನ್ನಾದರೂ ನಿಗದಿಪಡಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
40 ಲಕ್ಷ ರು.ಗೆ ಶಿಫಾರಸ್ಸು- ಡಿಸಿ:
ರಾಜ್ಯ ಸರ್ಕಾರ ನರಸಾಪುರ ಮತ್ತು ವೇಮಗಲ್‌ನಲ್ಲಿ ನಿಗದಿ ಮಾಡಿರುವ ದರವನ್ನು ನೀಡಲು ನಿರ್ಧರಿಸಿದೆ. ತಾವು ರೈತರ ಕಷ್ಟ ಅರಿತು ಹಾಗೂ ಪ್ರಸಕ್ತ ಮಾರುಕಟ್ಟೆ ಬೆಲೆಯನ್ನು ಆದಾರವಾಗಿಟ್ಟುಕೊಂಡು ಪ್ರತಿ ಎಕರೆಗೆ 40 ಲಕ್ಷ ರು.ನೀಡುವಂತೆ ಶಿಫಾರಸ್ಸು ಮಾಡುತ್ತೇನೆ. ಜಿಲ್ಲೆಯ ಅಭಿವೃದ್ಧಿ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ರೈತರು ಯಾವುದೇ ಕಾರಣಕ್ಕೂ 40 ಲಕ್ಷ ಒಪ್ಪುವುದಿಲ್ಲ. ಎಕರೆಗೆ 80 ಲಕ್ಷ ನಿಗದಿ ಮಾಡಲೇಬೇಕೆಂದು ತಮ್ಮ ಕೈಗಳನ್ನು ಮೇಲೆತ್ತಿ ಒಮ್ಮತದ ನಿರ್ಧಾರ ಪ್ರಕಟಿಸಿದಾಗ ಜಿಲ್ಲಾಧಿಕಾರಿಗಳು ನನಗೆ ಇರುವ ಅಧಿಕಾರದಡಿ ಸಭೆಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಮುಂದಿನ ನಿರ್ಧಾರ ಸರ್ಕಾರ ಕೈಗೊಳ್ಳುತ್ತದೆ ಎಂದು ಸಭೆಯಿಂದ ನಿರ್ಗಮಿಸಿದರು.
ಸಭೆಯಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನ ಅಧಿಕಾರಿ ಅಮರೇಶ್, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವೆಂಕಟೇಶ್, ಉಪ ವಿಭಾಗಾಧಿಕಾರಿ ಆಯುಷಾ ಫರ್ವೀನ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com