ಮಾಲೂರು: ಫೆ.23, 24 ರಂದು ಪಟ್ಟಣದಲ್ಲಿ ನಡೆಯಲಿರುವ 12 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಇಲ್ಲಿನ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರದಲ್ಲಿ ನಡೆಯಿತು.ಫೆ.23 ರಿಂದ ನಡೆಯಲಿರುವ ಸಾಹಿತ್ಯ ಜಾತ್ರೆಯಲ್ಲಿ ತಾಲೂಕಿನ ಎಲ್ಲ ಕಡೆಗಳಿಂದ ಜನರು ಭಾಗವಹಿಸುವಂತೆ ಅನುಕೂಲ ಕಲ್ಪಿಸಲು 4 ತಂಡ ರಚಿಸಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಹಳ್ಳಿಗಳಿಗೆ ಪಾದಯಾತ್ರೆ ಮೂಲಕ ತೆರಳಿ ಮಾಹಿತಿ ನೀಡಿ ಜನತೆಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಮ್ಮೇಳನದಲ್ಲಿ ನಡೆಯಲಿರುವ ವಿಚಾರಗೋಷ್ಠಿಯಲ್ಲಿ ಮುಖ್ಯವಾಗಿ ಶಾಶ್ವತ ನೀರಾವರಿ ಯೋಜನೆ, ಡಾ.ಪರಮಶಿವಯ್ಯ ವರದಿ ಅನುಷ್ಠಾನದ ಬಗ್ಗೆ ಚರ್ಚಿಸಬೇಕೆಂದು ಸಭೆಯಲ್ಲಿ ಭಾಗಹಿಸಿದ್ದ ಎಲ್ಲರು ಒತ್ತಾಯಿಸಿದರು. ತಾಲೂಕಿನ ಎಲ್ಲ ಸಂಘ-ಸಂಸ್ಥೆಗಳು, ರೈತ ಸಂಘಗಳು ತಮ್ಮ ಹೋರಾಟದ ಚಿತ್ರಗಳು ಸೇರಿದಂತೆ ತಾಲೂಕಿನ ಪ್ರಮುಖ ಯಾತ್ರಾಸ್ಥಳ, ಚಿತ್ರಗಳ ಪ್ರದರ್ಶನಗಳನ್ನು ಇಡುವಂತೆ ಸಲಹೆ ನೀಡಲಾಯಿತು. ತಾಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿರುವ ಕ್ರೀಡಾ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸುವುದು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರನ್ನು ಸಮ್ಮೇಳನದ ವೇದಿಕೆಯಲ್ಲಿ ಅಭಿನಂದಿಸಲು ಸಭೆ ಸರ್ವಾನುಮತದ ತೀರ್ಮಾನ ಕೈ ಗೊಂಡಿತು. ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಅಶ್ವಥ್ ರೆಡ್ಡಿ, ತಾಲೂಕು ಘಟಕದ ಅಧ್ಯಕ್ಷ ಮಧುಸೂಧನ್, ಎಂ.ವಿ.ಹನುಮಂತಯ್ಯ, ಖ್ಯಾತ ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂ.ಚಂದ್ರಪ್ಪ, ವಿ.ಶ್ರೀನಿವಾಸ್, ಮಾಲೂರು ವಿಜಿ, ಕರವೇ ಗೌರವಾಧ್ಯಕ್ಷ ಕಲಾವಿದ ಸ್ವಾಮಿ, ಅಧ್ಯಕ್ಷ ರಾಮಕೃಷ್ಣಪ್ಪ, ಎಸ್.ಎನ್.ರಘುನಾಥ್, ದಯಾನಂದ್ ಇದ್ದರು.
ಪುರಸಭೆ ಚುನಾವಣೆಯ ಕಾರ್ಮೋಡ: ಪಟ್ಟಣದಲ್ಲಿ ಫೆ.23 ರಿಂದ ನಡೆಯಲಿರುವ ಕನ್ನಡ ಸಾಹಿತ್ಯದ ಜಿಲ್ಲಾ ಸಮ್ಮೇಳನದ ಮೇಲೆ ರಾಜ್ಯ ಚುನಾವಣೆ ಆಯೋಗ ದಿಢೀರ್ ಘೋಷಿಸಿರುವ ಪುರಸಭೆ ಚುನಾವಣೆಯ ಕಾರ್ಮೋಡ ಕವಿಯುವಂತೆ ಮಾಡಿದೆ. ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಅಶ್ವಥ್ ರೆಡ್ಡಿ ಪ್ರತಿಕ್ರಿಯಿಸಿ, ರಾಜ್ಯ ಚುನಾವಣೆ ಆಯೋಗ ಚುನಾವಣೆ ಘೋಷಣೆ ಮಾಡಿದ ತಕ್ಷಣ ಈ ಬಗ್ಗೆ ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ್ದು, ಸಕಾರತ್ಮಕ ಸ್ಪಂದನೆ ಸಿಕ್ಕಿದೆ. ಕಳೆದ ಒಂದು ತಿಂಗಳ ಹಿಂದಿನಿಂದಲ್ಲೇ ಸಮ್ಮೇಳನದ ಸಿದ್ಧತೆ ಚಟುವಟಿಕೆ ಪ್ರಾರಂಭಿಸಿರುವುದನ್ನು ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರ ಬರೆದು ತಿಳಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದು, ರಾಜಕೀಯ ವ್ಯಕ್ತಿಗಳನ್ನು ಹೊರಗಿಟ್ಟು ಸಮ್ಮೇಳನ ನಡೆಸಲು ಅನುಮತಿ ಸಿಗಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂದಿದ್ದಾರೆ. ಆದರೆ ರಾಜಕೀಯದವರ ಸಹಕಾರವಿಲ್ಲದೆ ಸಮ್ಮೇಳನ ಯಶಸ್ವಿಗೊಳಿಸಲು ಸಾಧ್ಯವಿಲ್ಲ ಎಂದು ಸಂಘಟಕರು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ.