ಏಳಿಗೆ ಸಹಿಸದವರಿಂದ ಅನಗತ್ಯ ಆರೋಪ

Updated on: 

ಕೋಲಾರ: ಸಾಮಾಜಿಕ ನ್ಯಾಯಕ್ಕೆ ಅರ್ಥ ತಿಳಿಯದವರು, ಅಹಿಂದ ವರ್ಗದ ಏಳಿಗೆ ಸಹಿಸದವರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ನನ್ನ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರ್ ಪ್ರಕಾಶ್ ವಿರೋಧಿಗಳಿಗೆ ತಿರುಗೇಟು ನೀಡಿದರು.
ತಾಲೂಕಿನ ನಾಗಲಾಪುರ, ಗುಟ್ಟಹಳ್ಳಿ ಗ್ರಾಮಗಳಲ್ಲಿ ಸಿಮೆಂಟ್ ರಸ್ತೆ ಹಾಗೂ ಗುಡ್ಡಣಪುರ ಗ್ರಾಮದಲ್ಲಿ ಸೋಮವಾರ 12.50 ಲಕ್ಷ ರು. ವೆಚ್ಚದ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ರಾಜಕೀಯವಾಗಿ, ಆರ್ಥಿಕವಾಗಿ ಬಲಿಷ್ಠರಾಗುವುದನ್ನು ಸಹಿಸದೆ ರಾಜಕೀಯ ವಿರೋಧಿಗಳು ಅಸೂಯೆ ಪಡುತ್ತಿರುವುದಲ್ಲದೆ ನನ್ನನ್ನು ಜಾತೀವಾದಿ ಎನ್ನುತ್ತಿದ್ದಾರೆಂದು ವಿಷಾದಿಸಿದರು.
ಅಹಿಂದ ವರ್ಗಗಳಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುವ ನನ್ನ ಪ್ರಯತ್ನಕ್ಕೆ ಜಾತೀವಾದಿ ಎಂಬ ಹಣೆಪಟ್ಟಿ ಕಟ್ಟುತ್ತಿರುವ ಮಾಜಿ ಸಚಿವ ಕೆ. ಶ್ರೀನಿವಾಸಗೌಡರು 15 ವರ್ಷಗಳ ಕಾಲ ಶಾಸಕರಾಗಿ, ಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಿಂದುಳಿದ, ಅಲ್ಪ ಸಂಖ್ಯಾತರ, ದಲಿತರ ಅಭಿವೃದ್ಧಿಗೆ ಏಕೆ ಆಸಕ್ತಿ ತೋರಲಿಲ್ಲ, ಈಗ ಏಕೆ ನನ್ನ ವಿರುದ್ಧ ಮಾತನಾಡುತ್ತಿದ್ದಾರೆಂಬುದು ಕ್ಷೇತ್ರದ ಜನತೆ ಅರ್ಥ ಮಾಡಿಕೊಳ್ಳಲಾಗದಷ್ಟು ಅಮಾಯಕರಲ್ಲ, ಇದೇ ರೀತಿ ನನ್ನ ವಿರುದ್ಧ ಟೀಕೆಗಳು ಮಾಡುತ್ತಿದ್ದರೆ, ಮುಂದಿನ ಚುನಾವಣೆಯಲ್ಲಿ ನಾನು ಇನ್ನಷ್ಟು ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆಂದು ಮಾರ್ಮಿಕವಾಗಿ ನುಡಿದರು.
ಗೂಂಡಾಗಿರಿ, ಕೊಲೆಗಡುಕ ರಾಜಕಾರಣ ಮಾಡಿದವರಿಂದ ನಾನು ಪಾಠ ಕಲಿಯಬೇಕಿಲ್ಲ, ಇಂತಹವರಿಂದ ಜನ ಸಾಮಾನ್ಯರ ಉದ್ಧಾರವೂ ಸಾಧ್ಯವಿಲ್ಲ ಎಂಬುದನ್ನು ಅಹಿಂದ ವರ್ಗಗಳು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ದಾಯಾದಿಗಳಿಗೆ ತಂದಿಟ್ಟು, ಕೊಲೆಯಲ್ಲಿ ಅಂತ್ಯವಾದ ವಡಗೂರು ಜೋಡಿ ಕೊಲೆ ಪ್ರಕರಣದಲ್ಲಿ ಕ್ಷೇತ್ರದ ಹಿತಾಸಕ್ತಿ ಅಡಗಿತ್ತಾ, ಯಾರ ಅಭಿವೃದ್ಧಿಗಾಗಿ ಈ ಪ್ರಕರಣದಲ್ಲಿ ಕೆಲವರು ಜೈಲಿಗೆ ಹೋದ್ರು, ಇಂತಹ ರಾಜಕಾರಣ ನನ್ನ ಅವಧಿಯಲ್ಲಿ ನಡೆದಿದೆಯೇ  ಎಂದು ಸಚಿವರು ವಿರೋಧಿಗಳನ್ನು ಪ್ರಶ್ನಿಸಿದರು.
ಕೋಲಾರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ, ನನಗೆ ಮತ ನೀಡಿದ ಜನರ ಋಣ ತೀರಿಸುವ ಸಲುವಾಗಿ, ಒಳ್ಳೆ ಉದ್ದೇಶಕ್ಕಾಗಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದೆ. ಒಂದು ವೇಳೆ ಬೆಂಬಲ ಕೊಡದಿದ್ದರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿತ್ತು ಎಂದರು.
ಈ ಸಂದರ್ಭದಲ್ಲಿ ನಾಗಲಾಪುರದ ಮುಖಂಡರಾದ ವಿ.ಸಿ.ಒಡೆಯರ್, ತಾಪಂ ಮಾಜಿ ಅಧ್ಯಕ್ಷೆ ರಮಾದೇವಿ ಚಲಪತಿ, ವಕ್ಕಲೇರಿ ಗ್ರಾಪಂ ಅಧ್ಯಕ್ಷ ರಾಜಪ್ಪ, ಅರಾಭಿಕೊತ್ತನೂರು ಗ್ರಾಪಂ ಉಪಾಧ್ಯಕ್ಷೆ ರತ್ನಮ್ಮ ಶ್ರೀನಿವಾಸ್, ಸದಸ್ಯರಾದ ರಾಘವೇಂದ್ರ, ಹರ್ಷವರ್ಧನ್,  ಚಿಕ್ಕಮುನಿಯಪ್ಪ, ಆಲಹಳ್ಳಿ ಶ್ರೀನಿವಾಸ್, ಆಲಹಳ್ಳಿ ನಾಗರಾಜ್, ಚಲುವನಹಳ್ಳಿ ನಾರಾಯಣಸ್ವಾಮಿ, ಚಿಕ್ಕವೆಂಕಟರಮಣಪ್ಪ, ನಾರಾಯಣಪ್ಪ, ನಂಜೇಗೌಡ, ಮಂಜುನಾಥ್, ಶಿವಣ್ಣ, ಮುನಿರಾಜುಗೌಡ, ಬೈರಪ್ಪ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com