ಮಹಿಳೆ, ಮಕ್ಕಳಿಗಾಗಿ ಸಹಾಯವಾಣಿ ಕೇಂದ್ರ

Updated on: 

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸಂಚಾರಿ ವ್ಯವಸ್ಥೆ ಸುಧಾರಣೆಗೆ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿರುವ ಪೊಲೀಸ್ ಇಲಾಖೆ ಕಿರುಕುಳ, ದೌರ್ಜನ್ಯಕ್ಕೆ ಗುರಿಯಾಗುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಇದೇ ಪ್ರಥಮ ಬಾರಿಗೆ ಸಹಾಯವಾಣಿ ಕೇಂದ್ರ ಪ್ರಾರಂಭಿಸಿದೆ.
ಈ ಮೂಲಕ ಮಕ್ಕಳು ಮತ್ತು ಮಹಿಳೆಯರು ಸಮಸ್ಯೆಗಳಿಂದ ನೋವು ಅನುಭವಿಸುವುದನ್ನು ತಪ್ಪಿಸಲು ಮುಂದಾಗಿದೆ. ಇನ್ನು ಮುಂದೆ ಮಹಿಳೆಯರ ಸಮಸ್ಯೆಗಳಿಗೆ 1091 ಮತ್ತು ಶೋಷಣೆಗೆ ಗುರಿಯಾಗುವ ಮಕ್ಕಳ ಸಮಸ್ಯೆಗಳಿಗೆ 1098 ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಾಕು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ ನಂತರ ದುಷ್ಕರ್ಮಿಗಳಿಗೆ ಬೆಂಡ್ ಎತ್ತುತ್ತಾರೆ.
ಶಿಡ್ಲಘಟ್ಟ ತಾಲೂಕಿನ ನಡಪಿನಾಯಕನಹಳ್ಳಿಯಲ್ಲಿ ಎರಡನೇ ತರಗತಿ ಓದುತ್ತಿರುವ ಬಾಲಕಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ನಡೆಸಿದ್ದು ಮತ್ತು ಚಿಕ್ಕಬಳ್ಳಾಪುರ ತಾಲೂಕಿನ ಮಾರಗಾನಹಳ್ಳಿ ಸಮೀಪದ ಕೆರೆಗೆ ಬಟ್ಟೆ ಒಗೆಯಲು ಹೋದ ಮಹಿಳೆಯೊಬ್ಬರನ್ನು ಬೆದರಿಸಿ, ಆಕೆಯ ಬಳಿಯಿದ್ದ ಚಿನ್ನಾಭರಣಗಳನ್ನು ಕಸಿದುಕೊಂಡು ಪರಾರಿಯಾದ ಘಟನೆಗಳು ನಡೆದಿರುವುದರ ನಡುವೆ ಪೊಲೀಸ್ ಇಲಾಖೆಯಿಂದ ಸಹಾಯ ವಾಣಿ ಪ್ರಾರಂಭವಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಲ್ಲೆಯಲ್ಲಿ ಮಹಿಳೆಯರು ಶೋಷಣೆ, ಕಿರುಕುಳಕ್ಕೆ ಗುರಿಯಾಗುವಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ಭಯದಿಂದ ದೂರು ನೀಡಲು ಹಿಂಜರಿದು, ತಮಗಾದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲಾಗದೇ ಆ ನಂತರ ಸ್ವತಃ ಮಹಿಳೆಯರೇ ತೊಂದರೆ ಅನುಭವಿಸುವಂತಹುದೂ ಇದೆ ಎನ್ನುವುದನ್ನರಿತು ಪ್ರಾರಂಭಿಸಲಾಗಿರುವ ಸಹಾಯವಾಣಿಯು ಜನರಲ್ಲಿ ಧೈರ್ಯ ತುಂಬಲು ಸಹಕಾರಿಯಾಗಿದೆ.
ಸಹಾಯವಾಣಿ ಕೆಲಸ: ಸದ್ಯಕ್ಕೆ ಜಿಲ್ಲಾ ಕೇಂದ್ರ ವ್ಯಾಪ್ತಿಯಲ್ಲಿ ಸಹಾಯವಾಣಿ ಕೇಂದ್ರವು ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಕಾರ್ಯ ನಿರ್ವಹಿಸಲಿದೆ. ಆದಷ್ಟು ಬೇಗ ತಾಲೂಕುಗಳಲ್ಲೂ ಸಹ ಸಹಾಯವಾಣಿ ಕೇಂದ್ರದ ಪ್ರಯೋಜನವು ಸಿಗುವಂತೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಿದೆ.  ವರದಕ್ಷಿಣೆ ಕಿರುಕುಳ, ಹಲ್ಲೆ, ಲೈಂಗಿಕ ಕಿರುಕುಳ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಶೋಷಣೆಗೆ ಗುರಿಯಾದಾಗ ಮಹಿಳೆಯರು 1091 ಕ್ಕೆ ಕರೆ ಮಾಡಿ ತಮ್ಮ ಕಷ್ಟವನ್ನು ಹೇಳಿಕೊಳ್ಳಬಹುದು. ಇದರನ್ವಯ ತಕ್ಷಣ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಾರೆ. ಅದೇ ರೀತಿ 1098 ಕ್ಕೆ ಕರೆ ಮಾಡಿ ಮಕ್ಕಳ ಮೇಲಿನ ದೌರ್ಜನ್ಯ, ಕಿರುಕುಳದ ಬಗ್ಗೆ ದೂರು ಸಲ್ಲಿಸಿ ಸಹಾಯ ಪಡೆಯಬಹುದಾಗಿದೆ.
 ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಜಿಲ್ಲೆಯ ವಿವಿಧೆಡೆ ಸ್ವಾಂತನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು ಇವುಗಳಿಗೆ ಪೂರಕವಾಗಿ ಪೊಲೀಸ್ ಇಲಾಖೆಯ ಸಹಾಯವಾಣಿ ಸಹ ಮಹಿಳೆಯರು ಮತ್ತು ಮಕ್ಕಳ ಕಣ್ಣೀರು ಒರೆಸಲಿದೆ.
ಜಸ್ಟ್ ಕಾಲ್ ಮಾಡಿ: ಜಸ್ಟ್ ಒಂದು ಕಾಲ್ ಮಾಡಿ, ನಾವು ಬಂದು ತಕ್ಷಣ ರಕ್ಷಣೆ ಕೊಡುತ್ತೇವೆ. ಮಹಿಳೆಯರೇ ನೀವು ಯಾವುದಕ್ಕೂ ಹೆದರಬೇಕಾಗಿಲ್ಲ. ನಿಮ್ಮ ರಕ್ಷಣೆಗೆ ಪೊಲೀಸ್ ಇಲಾಖೆ ಇದೆ.
ಹೀಗೆ ನಗರದ ಗ್ರಾಮಾಂತರ ಪೊಲೀಸ್ ಠಾಣೆಯ ಆವರಣದಲ್ಲಿ ಸಹಾಯ ವಾಣಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಎನ್.ಶಿವಪ್ರಸಾದ್ ಭರವಸೆ ನೀಡಿದ್ದಾರೆ.
ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಎದೆಗುಂದಬಾರದು. ಕಿರುಕುಳ ಮತ್ತು ಶೋಷಣೆಯನ್ನು ಸಹಿಸಿಕೊಂಡು ಆ ನಂತರ ಆತ್ಮಹತ್ಯೆಗೆ ಶರಣಾಗುವುದು ಸಹ ತಪ್ಪು. ನಿಭರ್ಯವಾಗಿ ಸಮಸ್ಯೆಗಳನ್ನು ಎದುರಿಸಬೇಕೆಂತಲೂ ಸಲಹೆ ನೀಡಿದರು.
ಕಾಲೇಜಿನ ಹುಡುಗಿಯರು ಸಹ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಹುಡುಗರ ಮಾತುಗಳಿಗೆ ಮರುಳಾಗಿ ತೊಂದರೆಗಳಿಗೆ ಸಿಲುಕಿಕೊಳ್ಳಬಾರದು. ಇದರಿಂದ ಪೋಷಕರು ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ. ನೀವು ಸಹ ನೋವನ್ನು ಅನುಭವಿಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ದೇವಯ್ಯ, ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com