ಬಾಗೇಪಲ್ಲಿಯಲ್ಲಿ ಪೂರ್ಣ ಬಂದ್

Updated on: 

ಬಾಗೇಪಲ್ಲಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಸೇರಿದಂತೆ 11 ಕೇಂದ್ರ ಕಾರ್ಮಿಕ ಸಂಘಟನೆಗಳು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಾಗೂ ಭಾರತ್ ಬಂದ್ ಕರೆ ನೀಡಿದ್ದು ತಾಲೂಕಿನ ವಿವಿಧ ಭಾಗಗಳಲ್ಲಿ ಸಂಪೂರ್ಣ ಯಶಸ್ವಿ ಬಂದ್ ಆಚರಿಸಲಾಯಿತು.  
ಸಿಐಟಿಯು ತಾಲೂಕು ಸಮಿತಿಯ ವೈ.ಆರ್.ವೆಂಕಟೇಶ್ ಬಾಬು ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಹೆಚ್.ಎನ್. ವೃತ್ತದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ನಂತರ ಅಂಗನವಾಡಿ ನೌಕರರ, ಗ್ರಾ.ಪಂ,ಅಕ್ಷರ ದಾಸೋಹ, ಆಶಾ, ಟೋಲ್‌ಗೇಟ್ ಸೇರಿದಂತೆ ವಿವಿಧ ಅಸಂಘಟಿತ ಕಾರ್ಮಿಕರಿಗೆ ಷೆಡ್ಯೂಲ್‌ಗಳ ವ್ಯತ್ಯಾಸವಿಲ್ಲದೇ ಕನಿಷ್ಠ 10ಸಾವಿರ ರು. ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಬೆಳಿಗ್ಗೆ 6 ರಿಂದಲೇ ಸಿಐಟಿಯು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆ, ಗೂಳೂರು ರಸ್ತೆ, ಸರ್ಕಾರಿ ಬಸಸ್ನಿಲ್ದಾಣದ ಮುಂಭಾಗ, ಸಿಪಿಎಂ ಕಚೇರಿಯ ಮುಂಭಾಗ ಹಾಗೂ ರಾ.ಹೆ.7 ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲು ರಸ್ತೆಗಳಿಗೆ ಅಡ್‌ಡಲಾಗಿ ಕಲ್ಲುಗಳನ್ನು ಹಾಕಲಾಗಿತ್ತು. ಪ್ರತಿ ನಿತ್ಯವೂ ಪಟ್ಟಣದಲ್ಲಿ ವಾಹನ ಸಂಚಾರ ಮತ್ತು ಜನ ಸಂಚಾರದಿಂದ ಗಿಜಿಗುಡುತ್ತಿದ್ದ ರಸ್ತೆಗಳು ಹಾಗೂ ಸರ್ಕಾರಿ ಬಸ್‌ನಿಲ್ದಾಣದಲ್ಲಿ ಜನ ಸಂಚಾರವಿಲ್ಲದೇ ಪಟ್ಟಣದಲ್ಲಿ ಬಿಕೋ ಎನ್ನುತ್ತಿತ್ತು.
ಬರಗಾಲದಿಂದ ತತ್ತರಿಸುತ್ತಿರುವ ಪಟ್ಟಣದ ಜನತೆಗೆ ಉಚಿತವಾಗಿ ಟ್ರ್ಯಾಕ್ಟರ್ ಮೂಲಕ ಕುಡಿಯುವ ನೀರನ್ನು ಕೆಲವು ಸಮಾಜ ಸೇವಕರು ಸರಬರಾಜು ಮಾಡುತ್ತಿದ್ದರು. ಬಂದ್ ಪ್ರಯುಕ್ತ ಉಚಿತ ಕುಡಿಯುವ  ನೀರಿನ ಟ್ಯಾಂಕರ್‌ಗಳನ್ನು ಪ್ರತಿಭಟನಕಾರರು ಬಿಡಲು ನಿರಾಕರಿಸಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಪಟ್ಟಣದ ವಿವಿಧ ವಾರ್ಡ್‌ಗಳ ನೂರಾರು ಮಹಿಳೆಯರು ಜಮಾಯಿಸಿ ಪ್ರತಿಭಟನೆಯನ್ನು ನಡೆಸಿದರು.
 ನಂತರ ಪೊಲೀಸರು ಕುಡಿಯುವ ನೀರಿನ ಸಮಸ್ಯೆಯು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನೀರಿನ ಟ್ಯಾಂಕರ್‌ಗಳಿಗೆ  ರಿಯಾಯಿತಿಯನ್ನು ನೀಡುವಂತೆ ಪ್ರತಿಭಟನಕಾರರನ್ನು ಮನವೊಲಿಸುವಲ್ಲಿ ಪೊಲೀಸರು ಸಫಲರಾದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರು.
ಚಿತ್ರಾವತಿ ಟೆಂಪೋ ಮಾಲಿಕರ ಮತ್ತು ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಂಜನೇಯರೆಡ್ಡಿ, ಮುಸ್ತಾಫಾ, ರತ್ನಮ್ಮ, ವಿಜಯಭಾರತಿ, ರಾಧಮ್ಮ, ವೆಂಕಟಲಕ್ಷ್ಮಮ್ಮ, ಶಭಾನಾ, ಮುಭೀನಾ, ಶಿವಶಂಕರರೆಡ್ಡಿ, ಬಾಬುರೆಡ್ಡಿ, ವೆಂಕಟರಾಮಯ್ಯ, ಸುರೇಶ್ ಸಿಂಗ್ ಮುಂತಾದ ಮುಖಂಡರು ಬಂದ್ನ್‌ಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com