ಕೋಲಾರ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಜಿಂಕೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಕೋಟಿಗಾನಹಳ್ಳಿ ಅರಣ್ಯದಲ್ಲಿ ಜರುಗಿದೆ.
ಮಂಗಳವಾರ ರಾತ್ರಿ ಅರಣ್ಯದಿಂದ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಜಿಂಕೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಜಿಂಕೆಯು ಸ್ಥಳದಲ್ಲಿಯೇ ಮೃತಪಟ್ಟಿದೆ. ಕೋಟಿಗಾನಹಳ್ಳಿ ಅರಣ್ಯದಲ್ಲಿ ಜಿಂಕೆ, ಕಾಡುಹಂದಿ, ನವಿಲು, ಮೊಲಗಳು ಹೆಚ್ಚಾಗಿದ್ದು, ಅವುಗಳಿಗೆ ಕುಡಿಯಲು ನೀರು ಹಾಗೂ ಸೂಕ್ತ ರಕ್ಷಣೆಯಿಲ್ಲದೆ ನೀರನ್ನು ಅರಸಿ ಬರುವ ಪ್ರಾಣಿಗಳು ವಾಹನಗಳಿಗೆ ಸಿಕ್ಕಿ ಸಾವಿಗೀಡಾಗುತ್ತಿದ್ದು, ಅರಣ್ಯ ಇಲಾಖೆಯವರು ವನ್ಯ ಜೀವಿಗಳ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘ, ಹಸಿರುಸೇನೆ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶಗೌಡ ಹಾಗೂ ರೈತ ಸಂಘ ಹಾಗೂ ಹಸಿರುಸೇನೆ ಸಂಘಟನಾ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ನಿರ್ಲಕ್ಷ್ಯಕ್ಕೆ ಖಂಡನೆ: ಮೃತ ಜಿಂಕೆಯ ಮರಣೋತ್ತರ ಪರೀಕ್ಷೆಗೆ ಆಗಮಿಸಿದ ವಡಗೂರು ಪಶುವೈದ್ಯಾಧಿಕಾರಿ ಡಾ. ನಾಗಣ್ಣ ಎಂಬವರು ಶವ ಪರೀಕ್ಷೆಗೆ ತರಬೇಕಾದ ಸಲಕರಣೆ ತರದೆ ಸ್ಥಳಕ್ಕಾಗಮಿಸಿ ಗ್ರಾಮಸ್ಥರು ನೀಡಿದ ಚಾಕುವಿನಿಂದ ಜಿಂಕೆ ಕೊಯ್ದು ಅದನ್ನು ಹೊಲಿಯದೆ ಹಾಗೆ ಬಿಟ್ಟುಹೋಗಿದ್ದು, ಈ ಕುರಿತು ಪ್ರಶ್ನಿಸಿದಾಗ ಅದನ್ನು ಹೊಲಿಯಲು ನಮ್ಮ ಬಳಿ ಸೂಜಿ-ದಾರ ಇಲ್ಲವೆಂದು ಹಾರಿಕೆ ಉತ್ತರ ನೀಡಿದ್ದಾರೆಂದು ರೈತ ಮುಖಂಡರು ಆರೋಪಿಸಿದ್ದಾರೆ.