ಇಂದು ಮಹಾಕುಂಭಾಭಿಷೇಕ

Updated on: 

ಮುಳಬಾಗಲು: ತಾಲೂಕಿನ ನಂಗಲಿ ವೆಂಕಟಾಪುರ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಮೂರು ನೂರು ಕೋಟಿ ವೆಚ್ಚದ ಹೊಯ್ಸಳ ಶೈಲಿಯ ದೇವಾಲಯಕ್ಕೆ ಪೂರಕವಾಗಿ ಮಾರಮ್ಮ ದೇವಸ್ದಾನದ ಸ್ಥಿರಬಿಂಬ ಪ್ರತಿಷ್ಠಾಪನಾ ಮತ್ತು ಪ್ರತಿಷ್ಠಾನ ಮತ್ತು ನೂತನ ಶಿಲಾಮಯ ದೇವಾಲಯದ ಮಹಾಕುಂಭಾಭಿಷೇಕ ಕಾರ್ಯಕ್ರಮವನ್ನು ಜ. 24ರ ಗುರುವಾರ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ. ಬೆಂಗಳೂರು ರಾಮನುಜ ಮಠದ ತ್ರಿದಂಡ ವೆಂಕಟರಾಮಾನುಜ ಜೀಯರ್ ಮಹಾಸ್ವಾಮಿಗಳ ಸಮ್ಮುಖದಲ್ಲಿ ವಿದ್ವಾನ್ ರಾಘವೇಂದ್ರ ಶರ್ಮ ಕಾರ್ಯಕ್ರಮ ನಡೆಸಿಕೊಡುವರು.
ಸಾರ್ವಜನಿಕರ ಅಹವಾಲು ಸ್ವೀಕಾರ
ಚಿಕ್ಕಬಳ್ಳಾಪುರ: ಚಿಂತಾಮಣಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಮತ್ತು ಪೊಲೀಸ್ ನಿರೀಕ್ಷಕರು ಜ. 24ರಂದು ಬೆಳಗ್ಗೆ 11 ಗಂಟೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಚಿಂತಾಮಣಿ ತಾಲೂಕು ವ್ಯಾಪ್ತಿಯ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ವಿಳಂಬ, ನಿರ್ಲಕ್ಷ್ಯ ಮಾಡುತ್ತಿದ್ದಲ್ಲಿ ಮತ್ತು ಹಣಕ್ಕೆ ಒತ್ತಾಯಿಸುತ್ತಿದ್ದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಅಹವಾಲು ನೀಡಬಹುದು. ಸಭೆಯಲ್ಲಿ ಸಂಬಂಧಿಸಿದ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಎ.ಜಿ.ಮಂಜೇಗೌಡ ತಿಳಿಸಿದ್ದಾರೆ.
29ರಂದು ಜಿಪಂ ಸಾಮಾನ್ಯ ಸಭೆ
ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜ. 29 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಏರ್ಪಡಿಸಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಆರ್. ನರಸಿಂಹಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್. ಶೇಖರಪ್ಪ ತಿಳಿಸಿದ್ದಾರೆ.
ಆದಿಚುಂಚನಶ್ರೀ  ಶ್ರದ್ಧಾಂಜಲಿ: ಸಭೆ
ಕೋಲಾರ: ಇತ್ತೀಚೆಗೆ ನಿಧನರಾದ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಜಿಲ್ಲೆಯ ಒಕ್ಕಲಿಗ ಸಮುದಾಯವು ಶ್ರದ್ಧಾಂಜಲಿ ಅರ್ಪಿಸುವುದಕ್ಕೆ ನಿರ್ಧರಿಸಿದ್ದು, ಈ ಸಂಬಂಧ ಕೋಲಾರ ನಗರದ ಒಕ್ಕಲಿಗರ ಹಾಸ್ಟೆಲ್‌ನಲ್ಲಿ ಜ. 25 ರಂದು ಶುಕ್ರವಾರ ಸಂಜೆ 7 ಗಂಟೆಗೆ ಪೂರ್ವಭಾವಿ ಸಭೆ ಕರೆಯಲಾಗಿದೆ. ಜನಾಂಗದವರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ನೀಡಬೇಕೆಂದು ಮುಖಂಡರಾದ ಬಿಸಪ್ಪಗೌಡ, ಕೆ.ಬಿ. ಶಂಕರಪ್ಪ, ಕೆ.ಎಂ.ಜೆ. ಮೌನಿ ಹಾಗೂ ಕೃಷ್ಣಾರೆಜ್ಜಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯ ಶಿಕ್ಷಕ ಅಮಾನತು
ಚಿಂತಾಮಣಿ: ದೊಡ್ಡಬೊಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಜಿ.ಎಂ. ಶ್ರೀರಾಮ ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವುದಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಎ.ಅಜಿತ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ದೊಡ್ಡಬೊಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಜಿ.ಎಂ.ಶ್ರೀರಾಮ ಶಾಲಾ ಅನುದಾನ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಹಾಗೂ ಶಾಲಾ ದಾಖಲಾತಿಗಳನ್ನು ಬದಲಾಯಿಸಿ ವಿದ್ಯಾರ್ಥಿ ವೇತನ ನೀಡದೆ ವಂಚಿಸಿರುವ ಬಗ್ಗೆ ಗ್ರಾಮಸ್ಥರು ನೀಡಿದ ದೂರಿನ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಕಳೆದ ಹಲವು ತಿಂಗಳ ಹಿಂದೆ ಪ್ರಾಥಮಿಕ ವರದಿ ಕಳುಹಿಸಿದ್ದಾರೆ.
ಅಧಿಕಾರಿಗಳ ವರದಿ ಮೇರೆಗೆ ಬುಧವಾರದಂದು ಶಿಕ್ಷಣ ಇಲಾಖೆ ಶಿಸ್ತಿನ ಕ್ರಮ ಅನಿವಾರ್ಯವೆಂದು ತೀರ್ಮಾನಿಸಿ ಎ.ಅಜಿತ್ ಪ್ರಸಾದ್ ತಕ್ಷಣದಿಂದ ಜಾರಿಗೆ ಬರುವಂತೆ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿ ಸೂಕ್ತ ಕ್ರಮ ಕೈಗೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ನಾಗರಾಜ್‌ಗೆ ಸನ್ಮಾನ
ಚಿಕ್ಕಬಳ್ಳಾಪುರ: ರಾಮನಗರ ಜಿಲ್ಲಾ ತೋಟಗಾರಿಕಾ ಇಲಾಖಾ ವತಿಯಿಂದ ಕೆಂಗಲ್‌ನಲ್ಲಿ ನಡೆದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ನಂದಿಬೆಟ್ಟದ ಯೋಗನಂದೀಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಹಾಗೂ ನೈಸರ್ಗಿಕ ನಾರುಬೇರು ಕಲಾವಿದ ನಾಣ್ಯ, ನೋಟು ಸಂಗ್ರಹಣಾಕಾರ ಟಿ.ಎನ್. ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ತೋಟಗಾರಿಕಾ ಇಲಾಖೆಯ ಅಪರ ನಿರ್ದೇಶಕ ಡಾ. ಹಿತ್ತಲಮನಿ ಹಾಗೂ ಖ್ಯಾತ ಪರಿಸರವಾದಿ ಎಲ್ಲಪ್ಪರೆಡ್ಡಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com