ಕೋಲಾರ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಾಣಿಸಿಕೊಂಡಿರುವ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಪಕ್ಷ ಮತ್ತು ಸರ್ಕಾರದ ವಿಚಾರವಾಗಿ ಮಾತನಾಡುವುದಕ್ಕೆ ಅಧಿಕೃತ ವಕ್ತಾರರು ಇದ್ದಾರೆಂದು ಮುಜರಾಯಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಬುಧವಾರ ತಿರುಪತಿಗೆ ಹೋಗುವಾಗ ಮುಳಬಾಗಲಿನ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲವೆಂಬ ನಂಬಿಕೆ ಇದೆ. ಸಚಿವರಾದ ಉದಾಸಿ, ಶೋಭಾ ಸೇರಿದಂತೆ 13 ಶಾಸಕರ ರಾಜಿನಾಮೆ ವಿಚಾರವಾಗಿ ನಾನೇನು ಹೇಳುವುದಿಲ್ಲ. ಬಿಜೆಪಿಯ ರಾಜ್ಯಾಧ್ಯಕ್ಷರು ಮತ್ತು ವಕ್ತಾರರು ಈ ಕುರಿತು ಮಾತನಾಡುವ ಅಧಿಕಾರ ಹೊಂದಿದ್ದಾರೆಂದರು.
ತಿರುಪತಿಗೆ ದಿಢೀರ್ ಪ್ರವಾಸ ಕೈಗೊಳ್ಳುತ್ತಿರುವುದು ಸರ್ಕಾರ ಉಳಿಸು ಎಂದು ದೇವರನ್ನು ಬೇಡಿಕೆ ಸಲ್ಲಿಸುವುದಕ್ಕಾ, ಇಲ್ಲವೇ ತಮ್ಮ ಸ್ವಂತ ಕಾರ್ಯಕ್ಕಾಗಿಯೇ ಎಂಬ ಪ್ರಶ್ನೆಗೆ ಸಚಿವರು, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿರುವೆ ಎಂದು ಚುಟುಕಾಗಿ ಉತ್ತರಿಸಿದರು.