ಬಂಗಾರಪೇಟೆ: ಕಾಡಾನೆಗಳ ದಾಳಿ ಮುಂದುವರಿದಿದ್ದು, ಕಳೆದ ಎರಡು ದಿನಗಳಿಂದ ತಾಲೂಕಿನ ತೊಪ್ಪನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಆನೆಗಳ ಹಿಂಡು ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶ ಮಾಡಿ ರೈತರನ್ನು ಚಿಂತಾಕ್ರಾಂತರನ್ನಾಗಿಸಿದೆ.
ತಿಂಗಳ ಹಿಂದೆ ತಮಿಳುನಾಡಿನ ಅರಣ್ಯ ಪ್ರದೇಶದಿಂದ ಲಗ್ಗೆ ಹಾಕಿರುವ 50 ಆನೆಗಳ ಹಿಂಡು ಕಾಮಸಮುದ್ರ ಹೋಬಳಿಯ ಹತ್ತಾರು ಗ್ರಾಮಗಳಲ್ಲಿ ರಾತ್ರಿ ವೇಳೆ ದಾಳಿ ಮಾಡುತ್ತಿವೆ.
ಇದರಿಂದ ಬರಗಾಲದಲ್ಲಿ ಕಷ್ಟಪಟ್ಟು ಬೆಳೆದಿರುವ ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳು ನಾಶವಾಗಿವೆ. ಅರಣ್ಯ ಇಲಾಖೆ ಅಂದಾಜಿನ ಪ್ರಕಾರವೇ 70 ಲಕ್ಷಕ್ಕೂ ಹೆಚ್ಚಿನ ಬೆಳೆಗಳನ್ನು ಹಾನಿ ಮಾಡಿದೆ ಎಂದು ಹೇಳಲಾಗುತ್ತಿದೆ.
ತಿಂಗಳಿಂದ ಆನೆಗಳನ್ನು ಓಡಿಸಲು ಇಲಾಖೆ ನುರಿತ ಸಿಬ್ಬಂದಿಯೊಂದಿಗೆ ಹಗಲು- ರಾತ್ರಿ ಕಾರ್ಯಾಚರಣೆ ಮಾಡುತ್ತಿದ್ದರೂ ಇಲಾಖೆ ಸಿಬ್ಬಂದಿ ಕಣ್ಣು ತಪ್ಪಿಸಿ ಓಡಾಡುತ್ತಿವೆ.
ಆನೆಗಳ ಹಿಂಡು ಮೂರು ತಂಡಗಳಾಗಿ ವಿಂಗಡಿಸಿರುವುದರಿಂದ ಸಿಬ್ಬಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಷ್ಟು ದಿನ ದೋಣಿಮಡಗು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ನುಗ್ಗಿ ಬೆಳೆಗಳನ್ನು ನಾಶ ಮಾಡಿದ್ದವು.
ಈಗ ತೊಪ್ಪನಹಳ್ಳಿ ಪಂಚಾಯಿತಿಯ ಚಾಮನಹಳ್ಳಿ ಗ್ರಾಮಕ್ಕೆ ನುಗ್ಗಿರುವ ಹಿಂಡು ಆರ್. ರಾಮಚಂದ್ರಾರೆಡ್ಡಿ ಎಂಬವರ ಮೂರು ಎಕರೆಯಲ್ಲಿ ಹಾಕಿದ್ದ ಬಾಳೆ ತೋಟಕ್ಕೆ ನುಗ್ಗಿ ಸಂಪೂರ್ಣವಾಗಿ ಬೆಳೆ ನಾಶ ಮಾಡಿದೆ.
ಅದೇ ರೀತಿ ಕಳವಂಚಿ ಗ್ರಾಮದ ವೆಂಕಟಪ್ಪ ಎಂಬವರ ವಿಳ್ಯದೆಲೆ ತೋಟ ಸಹ ನೆಲಕಚ್ಚಿದೆ. ಎರಡು ಆನೆಗಳ ಹಿಂಡನ್ನು ಈಗಾಗಲೇ ತಮಿಳುನಾಡಿನ ಅರಣ್ಯಕ್ಕೆ ಅಟ್ಟಿಸಲಾಗಿದೆ. ಉಳಿದ ಮತ್ತೊಂದು ತಂಡವನ್ನು ವಾಪಸ್ ಕಳುಹಿಸಲು ಹರಸಾಹಸ ಮಾಡಲಾಗುತ್ತಿದೆ. ಗುರುವಾರ ಆನೇಕಲ್‌ನಿಂದ ಮತ್ತೊಂದು ಆನೆಗಳನ್ನು ಓಡಿಸುವ ಪರಿಣಿತರ ತಂಡ ಆಗಮಿಸಲಿದೆ ಎಂದು ರೇಂಜರ್ ಚಂದ್ರಶೇಖರರೆಡ್ಡಿ ತಿಳಿಸಿದ್ದಾರೆ.