ಕೋಲಾರ: ಕಡಿಮೆ ನೀರು ಬಳಸಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ತಾಲೂಕಿನ ಕಲ್ಕೆರೆಯ ರೈತ ಎಂ. ನಾರಾಯಣಸ್ವಾಮಿ ಎಂಬವರು ಬಂಪರ್ ಟೋಮೆಟೋ ಬೆಳೆದು ಕೃಷಿಕರ ಗಮನ ಸೆಳೆದಿದ್ದಾರೆ.
ನರಸಾಪುರ ಹೋಬಳಿಯ ಕಲ್ಕರೆ ಗ್ರಾಮದ ಎಂ. ನಾರಾಯಣಸ್ವಾಮಿ ತಮ್ಮ ಒಂದೂವರೆ ಎಕರೆ ತೋಟದಲ್ಲಿ 1.20 ಲಕ್ಷ ಖರ್ಚು ಮಾಡಿ ಹೈಬ್ರಿಡ್ ತಳಿಯ ಟೋಮೆಟೋ ಬೆಳೆದು 4 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇದ್ದು, ಅಂತರ್ಜಲ 1500 ಅಡಿ ತಲುಪಿ ರೈತರು ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಪ್ರಗತಿಪರ ರೈತ ನಾರಾಯಣಸ್ವಾಮಿ ಹನಿ ನೀರಾವರಿ ಪದ್ಧತಿ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ. ಈ ಕೃಷಿಕ ಈಗಾಗಲೇ ಮೊದಲ ಮೂರು ಮಾದರಿ ಟೋಮೆಟೋ ಕಿತ್ತು ಮಾರುಕಟ್ಟೆಗೆ ಹಾಕಿದ್ದು, ಅವರ ಪ್ರಕಾರ ಪ್ರತಿ ಗಿಡದಿಂದ 10 ಕೆಜಿ ಹಣ್ಣು ಸಿಗಲಿದೆ. ಒಟ್ಟಾರೆ ಸುಮಾರು 50 ಟನ್ ಬೆಳೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗ ಮಾರುಕಟ್ಟೆಯಲ್ಲಿ 15ಕೆಜಿ ಬಾಕ್ಸ್ ಒಂದಕ್ಕೆ ಸುಮಾರು 130 ರಿಂದ 150 ರುವರೆಗೂ ಮಾರಾಟವಾಗುತ್ತಿದ್ದು, ಸರಾಸರಿ 120 ಕ್ಕೆ ಮಾರಾಟವಾದರೂ ಸುಮಾರು 4 ಲಕ್ಷ ಲಾಭ ಸಿಗಲಿದೆ ಎಂಬ ವಿಶ್ವಾಸ ಈ ರೈತನದ್ದು.
ರೈತ ನಾರಾಯಣಸ್ವಾಮಿ ತೋಟದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಟೋಮೆಟೋ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ರೈತರು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಿಕೋಟ, ಅನಂತಪುರ ಜಿಲ್ಲೆಯ ಕಲ್ಯಾಣದುರ್ಗದಿಂದ ರೈತರು ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಟೋಮೆಟೋ ಬಿತ್ತನೆ ಬೀಜಗಳ ಕಂಪನಿಗಳ ಅಧಿಕಾರಿಗಳು ಇದ್ದರು.