ಕೋಲಾರ: ಪ್ರತಿವರ್ಷದಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ರಸ್ತೆ ಸುರಕ್ಷತಾ ಸಪ್ತಾಹವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಜನತೆಯಲ್ಲಿ ಜಾಗೃತಿ ಮೂಡಿಸಲು ಬುಧವಾರ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡು ಸಂಚಾರಿ ಪೊಲೀಸ್ ಠಾಣೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು. ಜಿಪಂ ಸಿಇಒ ಜುಲ್ಫಿಖರ್ವುಲ್ಲಾ ಅವರು ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ನಿವಾಸ್ ಸಪಟ್ ಅವರು ಇದೇ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಠಾಣೆ ಆವರಣದಲ್ಲಿ ಸಸಿ ನೆಟ್ಟರು. ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಶ್ರೀಹರಿ ಬರಗೂರು, ಸಿಪಿಐ ಜಗದೀಶ್, ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಸೊಣ್ಣಪ್ಪ, ನಗರ ಠಾಣೆಯ ಪಿಎಸ್ಐ ಅಂಬರೀಷ್ ಇದ್ದರು.
ಯುವಕರು ನೇತಾಜಿ ಆದರ್ಶ ಪಾಲಿಸಲಿ
ಕೋಲಾರ: ದೇಶಕ್ಕಾಗಿ ಮಡಿದ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಆದರ್ಶನಗಳನ್ನು ಯುವಕರು ಸ್ಫೂರ್ತಿಯಾಗಿ ಪರಿಗಣಿಸಿ ದೇಶಕ್ಕಾಗಿ ಶ್ರಮಿಸಬೇಕೆಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ಎಸ್. ನಾಗರಾಜಗೌಡ ತಿಳಿಸಿದರು. ನಗರದ ಕಾರಂಜಿಕಟ್ಟೆ ಬಡಾವಣೆಯಲ್ಲಿನ ಸುಭಾಷ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ಸುಭಾಷ್ಚಂದ್ರ ಬೋಸ್ರ 116ನೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ನೇತಾಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಅಪ್ರತಿಮ ದೇಶಪ್ರೇಮಿಯಾಗಿದ್ದ ಸುಭಾಷರು ಸದಾ ರಾಷ್ಟ್ರದ ಚಿಂತನೆಯಲ್ಲಿ ತೊಡಗಿ ಅಮರರಾದರು. ಸ್ವಾತಂತ್ರ್ಯ ಗಳಿಸಿಕೊಟ್ಟ ವೀರರಾದರೆಂದು ಸ್ಮರಿಸಿದರು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್ಕುಮಾರ್ ಮಾತನಾಡಿ, ದೇಶನಾಯಕರ ಭಾವಚಿತ್ರಗಳ ಜೊತೆಗೆ ಅವರ ಆದರ್ಶಗಳನ್ನು ನೆನೆಯುವ ಜಯಂತಿಗಳು ಇಂದಿನ ಅಗತ್ಯ ಎಂದರು. ತಾಪಂ ನಿರ್ಮಲ ಭಾರತ ಅಭಿಯಾನ ಸಂಯೋಜಕ ಜಿ.ಶ್ರೀನಿವಾಸ್ ಮಾತನಾಡಿ, ಸುಭಾಷ್ಚಂದ್ರ ಬೋಸ್ ಅವರ ಕೃತಿಗಳ ಅಧ್ಯಯನ ಮಾಡಿ ಆದರ್ಶಪ್ರಾಯರಾಗಬೇಕೆಂದು ತಿಳಿಸಿದರು.ಇದೇ ಸಂದರ್ಭದಲ್ಲಿ ನಡೆದ ಚರ್ಚಾ ಸ್ಪರ್ಧೆಯಲ್ಲಿ ಎಚ್.ಎನ್. ಸಾರಿಕಾ, ನವಿತೇಜ ಕ್ರಮವಾಗಿ ಬಹುಮಾನ ಪಡೆದುಕೊಂಡರು. ಸುಭಾಷ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ಗೋಪಾಲಕೃಷ್ಣಾರೆಡ್ಡಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ವೇಣುಗೋಪಾಲ್ ಇದ್ದರು. ಶಿಕ್ಷಕ ಕೆ.ಎನ್.ಶ್ರೀನಿವಾಸಪ್ಪ ಸ್ವಾಗತಿಸಿ ವಂದಿಸಿದರು.