ಕೋಲಾರ: ನಮ್ಮ ಕಾರ್ಖಾನೆಯಲ್ಲಿ ಈಗಾಗಲೇ ಶೇ.90 ರಷ್ಟು ಕನ್ನಡಿಗರಿಗೆ ಉದ್ಯೋಗವಕಾಶ ನೀಡಲಾಗಿದೆ ಎಂದು ಹೋಂಡಾ ಮೋಟಾರ್ಸೆ ಸೈಕಲ್ ಮತ್ತು ಸ್ಕೂಟರ್ ಕಂಪನಿಯ ಆಡಳಿತ ಮಂಡಳಿ ಅಧಿಕಾರಿ ಪಟೀಲ್ ತಿಳಿಸಿದರು.
ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕರವೇ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ಕಾರ್ಯಕರ್ತರಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಹೋಂಡಾ ಕಂಪನಿ ಇತ್ತೀಚೆಗೆ ಪ್ರಾರಂಭವಾಗಿದ್ದು, ಹಂತ ಹಂತವಾಗಿ ತರಬೇತಿ ನೀಡಿ ಉದ್ಯೋಗವನ್ನು ಸ್ಥಳೀಯರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಖಾನೆಯಲ್ಲಿ ಪ್ರಸ್ತುತ 3500ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದು, ಇದರಲ್ಲಿ ಶೇ.90 ರಷ್ಟು ಮಂದಿ ಸ್ಥಳೀಯರೇ ಇದ್ದರೆ ಎಂದಾಗ, ಕೇವಲ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನೇಮಿಸಿಕೊಳ್ಳದೆ ಕಾಯಂ ಗುತ್ತಿಗೆದಾರರನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರು ಒತ್ತಾಯಿಸಿದರು.
ತಮ್ಮ ಕಂಪನಿಯಲ್ಲಿ ಇರುವಂತಹ ಆಡಳಿತ ಮಂಡಳಿಯಿಂದ ಹಿಡಿದು ನೌಕರವರೆಗೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ ಅವರು, 1ವರ್ಷ ದುಡಿಸಿಕೊಂಡು ಕಾರ್ಮಿಕರನ್ನು ವಿನಾಕಾರಣ ಮನಗೆ ಕಳುಹಿಸುವ ಪ್ರಯತ್ನ ಮಾಡಬಾರದೆಂದು ಎಚ್ಚರಿಕೆ ನೀಡಿದರು.
ಮೊದಲ ಹಂತವಾಗಿ ತಾವು ಸಾಂಕೇತಿಕವಾಗಿ ಧರಣಿ ಮಾಡಿ ಮನವಿ ಪತ್ರವನ್ನು ನೀಡಲಾಗುತ್ತಿದೆ, ತಮ್ಮ ಧೋರಣೆಯನ್ನು 15 ದಿನಗಳಲ್ಲಿ ಸರಿ ಮಾಡಿಕೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಿದ ಹೋಂಡಾ ಕಂಪನಿಯ ಆಡಳಿತಾಧಿಕಾರಿ ಪಟೀಲ್ ಈ ಬಗ್ಗೆ ಸಂಬಂಧಿಸಿ ಅಧಿಕಾರಿಗಳ ಜೊತೆ ಮಾತನಾಡಿ ಎಲ್ಲ ಸಮಸ್ಯೆಯನ್ನು ನಿವಾರಿಸುವುದಾಗಿ ಭರವಸೆ ನೀಡಿದರು.
Advertisement