ಶಿಡ್ಲಘಟ್ಟ: ರಾಜ್ಯಾದ್ಯಂತ ಶಾಲೆಗಳು ಆರಂಭಿಸಿ ವಿದ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಿದ್ದರು ಸಹ ತಾಲೂಕಿನ ಬಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಂಗನವಾಡಿಗೆ ಸರಬರಾಜು ಮಾಡಿರುವ ಅಕ್ಕಿಯಿಂದ ಊಟ ಸೇವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಅಂಶ ಬೆಳಕಿಗೆ ಬಂದಿದೆ.
ಬಶೆಟ್ಟಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 130 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶಾಲೆ ಆರಂಭದಿಂದ ಅಕ್ಷರ ದಾಸೋಹ ಯೋಜನೆಯಡಿ ಅಕ್ಕಿ ಸರಬರಾಜು ಮಾಡಿಲ್ಲ ಎಂದು ಸಮೀಪದ ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡಿರುವ ಅಕ್ಕಿಯಲ್ಲಿ ಉಟ ಬಡಿಸಲಾಗುತ್ತಿದೆ ಎಂದು ಶಾಲೆಯ ಪ್ರಭಾರಿ ಮುಖ್ಯಶಿಕ್ಷಕಿ ರೇಖಾ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದ ತಾಲೂಕು ಪಂಚಾಯಿತಿಯ ಅಧ್ಯಕ್ಷ ಯರಬಚ್ಚಪ್ಪಗೆ ಮಾಹಿತಿ ನೀಡಿದರು.
ಶಾಲೆಗಳು ಆರಂಭವಾದರೂ ಅಕ್ಕಿ ಸರಬರಾಜು ಮಾಡಲು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ನಿರ್ಲಕ್ಷ್ಯ ವಹಿಸಿರುವ ಕುರಿತು ತಾಲೂಕು ಪಂಚಾಯಿತಿ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿ, ಬಡವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಸರಿಪಡಿಸುವುದಾಗಿ ಭರವಸೆ ನೀಡಿದರು.
ನಂತರ ತಮ್ಮ ಕಚೇರಿಯಲ್ಲಿ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ರಂಗಪ್ಪ ಅವರನ್ನು ಶಾಲೆ ಆರಂಭದಲ್ಲಿ ಕಳಪೆ ಗುಣಮಟ್ಟದ ಬೇಳೆ ಸರಬರಾಜು ಮಾಡಿದ ಹಿನ್ನೆಲೆಯನ್ನು ಅದನ್ನು ವಾಪಸ್ಸು ಕಳುಹಿಸಿದರಿಂದ ಅಕ್ಕಿ ಸರಬರಾಜು ಮಾಡಲು ತೊಂದರೆಯಾಗಿದೆ. ಜೊತೆಗೆ ಶಾಲೆಗಳಿಗೆ ಅಕ್ಕಿ ಸರಬರಾಜು ಮಾಡುವ ವಾಹನಗಳ ಗುತ್ತಿಗೆದಾರ ಜಿಲ್ಲೆಯ ವಿವಿಧ ತಾಲೂಕುಗಳ ಉಸ್ತುವಾರಿ ವಹಿಸಿದ್ದರಿಂದ ತೊಂದರೆಯಾಗಿದೆ ಎಂದು ಸ್ಪಷ್ಟಪಡಿಸಿ ಮಂಗಳವಾರ ಅಥವಾ ಬುಧವಾರ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
Advertisement