ಕ.ಪ್ರ.ವಾರ್ತೆ ್ಣ ಚಿಕ್ಕಬಳ್ಳಾಪುರ ್ಣ ಮಾ. 19
ಬಹಳಷ್ಟು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಓದುವುದೇ ದೊಡ್ಡ ಕೆಲಸ. ಇನ್ನೆಲ್ಲಿ ಸಾಹಿತ್ಯದ ಕಡೆಗೆ ಅವರು ಪರಿಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎನ್ನುವ ಹಲವರ ಮಾತಿಗೆ ವಿರುದ್ಧವಾಗಿ ಶ್ರೀ ಜಚನಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯಾದ ರಾಜಹಂಸರವರು ಕಿರಿಯ ವಯಸ್ಸಿನಲ್ಲಿಯೇ ತಮ್ಮ ಬೆಳದಿಂಗಳ ಚಂದ್ರಮ ಕವನ ಸಂಕಲನ ಪುಸ್ತಕವನ್ನು ರಚಿಸಿ ಬಿಡುಗಡೆ ಮಾಡಿಸುವ ಮೂಲಕ ಕಿರಿಯರಿಗೆ ಮಾದರಿ ಎನಿಸಿಕೊಂಡು ಗಮನ ಸೆಳೆದರು.
ನಗರದ ಅಂಬೇಡ್ಕರ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಮಠದ ಶ್ರೀ ಪೂರ್ಣಾನಂದ ಸ್ವಾಮೀಜಿ ಮಂಗಳವಾರ ಬೆಳದಿಂಗಳ ಚಂದ್ರಮ ಪುಸ್ತಕವನ್ನು ಬಿಡುಗಡೆ ಮಾಡಿದರು. ನಂತರ ಸಿನಿಮಾ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿ ಇದೀಗ ಪದವಿ ಕಾಲೇಜಿನಲ್ಲಿ ಓದುತ್ತಿರುವ ಕಿರಿಯ ಕವಿ ರಾಜಹಂಸರವರ ಸಾಹಿತ್ಯ ಪ್ರೌಢಿಮೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರಗೆ ತರುವಂತಹ ಕೆಲಸವಾದಾಗ ತಮ್ಮಲ್ಲಿನ ಪ್ರತಿಭ ಬಗ್ಗೆ ತಿಳಿಯುತ್ತದೆ. ಇದಕ್ಕೆ ಪ್ರೋತ್ಸಾಹ ನೀಡಬೇಕಾಗಿರುವುದು ಮಹತ್ತರವಾದುದು. ಇದನ್ನರಿತು ಯುವ ಪ್ರತಿಭೆಗಳು ಸಮಾಜದಲ್ಲಿ ಮುಂದೆ ಬರಲು ಪ್ರತಿಯೊಬ್ಬರು ತಮ್ಮ ಕೈಯಲ್ಲಾದಷ್ಟು ಸಹಕಾರ ನೀಡಬೇಕು. ಅವಕಾಶಗಳು ಸಿಕ್ಕಾಗ ಪ್ರತಿಭಾವಂತರು ಸಹ ಸದುಪಯೋಗಪಡಿಸಿಕೊಳ್ಳಬೇಕೆಂದು ಶ್ರೀಗಳು ಸಲಹೆ ನೀಡಿದರು.
ವಿದ್ಯಾರ್ಥಿ ದೆಸೆಯಲ್ಲಿ ರಾಜಹಂಸರವರು ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಂಡು ಉತ್ತಮ ಕವನಗಳನ್ನು ಬರೆದು ಸಮಾಜದ ಮುಂದಿಟ್ಟಿರುವಂತಹುದು ಶ್ಲಾಘನೀಯ. ಸಾಹಿತ್ಯದ ಮೊದಲ ಮೆಟ್ಟಿಲು ತುಳಿಯುವ ಕಿರಿಯ ಸಾಹಿತಿಗಳಿಗೆ ಮಾದರಿಯಾಗಿ ಗಮನ ಸೆಳೆದಿದ್ದಾರೆ. ಹೀಗೆ ಮುಂದಿನ ದಿನಗಳಲ್ಲೂ ತಮ್ಮ ಪ್ರತಿಭೆಯ ಮೂಲಕ ಒಳ್ಳೆಯ ಹೆಸರನ್ನು ಗಳಿಸಲಿ ಎಂದು ಆಶೀರ್ವದಿಸಿದರು.
ಯುವ ಸಾಹಿತಿಗಳನ್ನು ಗುರುತಿಸಿ: ಸಂಪನ್ಮೂಲ ವ್ಯಕ್ತಿ ಪ್ರೊ. ಕೋಡಿರಂಗಪ್ಪ ಮಾತನಾಡಿ, ಯಾವುದೇ ಕ್ಷೇತ್ರದಲ್ಲಾಗಲಿ ಆಸಕ್ತಿ, ಕುತೂಹಲದಲ್ಲಿ ಕೆಲಸವನ್ನು ಮಾಡಿಕೊಂಡು ಹೋದಂತೆ ಯಶಸ್ಸನ್ನು ಸಾಧಿಸುತ್ತೇವೆ. ಪ್ರಸ್ತುತ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಳ್ಳುವಂತಹ ಮನೋಭಾವನೆಯು ಕಡಿಮೆಯಾಗುತ್ತಿರುವುದನ್ನು ಕಾಣಬಹುದು. ಹಾಗೆಯೇ ಯುವ ಸಾಹಿತಿಗಳನ್ನು ಗುರುತಿಸುವಂತಹುದು ಸಹ ಕಡಿಮೆ. ಈ ಮನೋಭಾವನೆ ಬದಲಾಗಬೇಕು. ತನ್ನದೇ ಆದ ಪರಂಪರೆ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಕೆಲಸವಾಗಬೇಕೆಂದರು.
ಬೆಳೆದಿಂಗಳ ಚಂದ್ರಮ ಕವನ ಸಂಕಲನ ಪುಸ್ತಕದ ರಚನೆಕಾರ ರಾಜಹಂಸ ಮಾತನಾಡಿ, ತಮ್ಮಲ್ಲಿನ ಪ್ರತಿಭೆಯನ್ನು ಹಲವರು ಗುರುತಿಸಿ ಪ್ರೋತ್ಸಾಹಿಸಿದ ಕಾರಣದಿಂದಾಗಿ ತಾವು ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡು ಇಷ್ಟು ಬೇಗ ತಮ್ಮ ಮೊದಲ ಕವನ ಸಂಕಲನ ಪುಸ್ತಕವನ್ನು ಬಿಡುಗಡೆ ಮಾಡಲು ಸಾಧ್ಯವಾಯಿತು ಎಂದ ಅವರು, ಒಳ್ಳೆಯ ಸಿನಿಮಾ ನಿರ್ದೇಶಕನಾಗಿ ಬೆಳೆಯಬೇಕೆಂಬ ಆಶಯ ಹೊಂದಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಜಯರಾಮ್, ಸಿ ನ್ಯೂಸ್ ವ್ಯವಸ್ಥಾಪಕ ಸಂಪಾದಕ ಕುಮಾರಸ್ವಾಮಿ, ಪ್ರಾಂಶುಪಾಲರಾದ ನಾಗಭೂಷಣ್, ನಗೀನ್ ಅಹಮದ್, ಸಮಾಜಸೇವಕ ಲಕ್ಷ್ಮೀಪತಿಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ಜಿಲ್ಲಾ ಕಾರ್ಯದರ್ಶಿ ಅಮೃತ್‌ಕುಮಾರ್, ತಾಲೂಕು ಅಧ್ಯಕ್ಷ ಕೆ.ಪಿ.ನವಮೋಹನ್, ಗೌರವ ಕಾರ್ಯದರ್ಶಿ ಎಂ.ಕಣಷ್ಣಪ್ಪ, ನಿವೃತ್ತ ತಹಸೀಲ್ದಾರ್ ಶೇಷಭಟ್, ಉಪನ್ಯಾಸಕ ಪ್ರದೀಪ್, ನಗರಸಭಾ ಸದಸ್ಯೆ ಜಯಮ್ಮ ಮುಂತಾದವರು ಉಪಸ್ಥಿತರಿದ್ದರು.
Advertisement