ಚಿಂತಾಮಣಿ: ತಾಲೂಕಿನ ಆಲಂಬಗಿರಿ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ಆಲಂಬಗಿರಿ ಬೆಟ್ಟದ ಪ್ರಕೃತಿ ತೊಪ್ಪಲಿನಲ್ಲಿ ಹುಣ್ಣಿಮೆ ಪ್ರಯುಕ್ತ ಸಂಕೀರ್ತನಾ ಗಿರಿಪ್ರದಕ್ಷಿಣೆ ಕಾರ್ಯಕ್ರಮ ನಡೆಯಿತು.
ಪ್ರತಿ ತಿಂಗಳ ಹುಣ್ಣಿಮೆ ದಿನ ಸಂಜೆ 5 ಗಂಟೆಗೆ ಆಲಂಬಗಿರಿ ಬೆಟ್ಟದ ಗಿರಿಪ್ರದಕ್ಷಿಣೆಗಾಗಿ ಸುಮಾರು 500 ಜನರ ಭಕ್ತರ ದಂಡು ಸೇರುತ್ತಾರೆ. ಇವರೆಲ್ಲರೂ ಆಲಂಬಗಿರಿ ಬೆಟ್ಟದ ಗಿರಿಪ್ರದಕ್ಷಿಣೆಗಾಗಿ ಬರುತ್ತಾರೆ. ಸುಮಾರು 10 ವರ್ಷಗಳಿಂದಲೂ ಈ ಬೆಟ್ಟದ ಸುತ್ತಲೂ ಗಿರಿಪ್ರದಿಕ್ಷಿಣೆ ನಡೆಯುತ್ತಿದೆ. ಅರ್ಚಕರು ಪೂಜಾ ಕೈಂಕರ್ಯ ನೆರವೇರಿಸಿ, ಸಂಕೀರ್ತಾನೆಯೊಂದಿಗೆ ಶ್ರದ್ಧಾಭಕ್ತಿಗಳಿಂದ ಗಿರಿಪ್ರದಕ್ಷಿಣೆಗೆ ತೆರಳುವುದು ವಿಶೇಷ. ಸ್ವಯಂಭೂವಾಗಿ ಲಕ್ಷ್ಮಿ ವೆಂಕಟರಮಣಸ್ವಾಮಿ ಬಂದು ನೆಲೆಸಿದ್ದಾನೆ. ಇದನ್ನು ಕಂಡ ವಿಜಯನಗರದ ಸಾಮ್ರಾಜ್ಯದ ಅರಸರು ಇಲ್ಲಿ ದೇವಾಲಯ ನಿರ್ಮಿಸಿದ್ದಾರೆ. ಆಲಂಬಗಿರಿ ದೇವಾಲಯಕ್ಕೆ ಸುಮಾರು 1 ಕಿ.ಮೀ. ದೂರದ ಬೆಟ್ಟ ಅತ್ಯಂತ ಪವಿತ್ರ ತಾಣವಾಗಿದೆ. ೆಟ್ಟದ ಹತ್ತಿರ ವೆಂಕಟ ತೀರ್ಥವೆಂಬ ಪುಟ್ಟ ಸರೋವರವಿದೆ. ಇದರ ಆಳ 8 ಅಡಿ. ಇಲ್ಲಿ ಸಮೃದ್ಧಿಯಾಗಿ ಸರ್ವ ಋತುಗಳಲ್ಲಿಯೂ ನೀರು ಇರುತ್ತದೆ. ತಿರುಮಲದ ದೇವರ ಅಭಿಷೇಕಕ್ಕೆ ಈ ಕೊಳದಿಂದ ನೀರನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂಬ ಪ್ರತೀತಿ ಇದೆ. ಇಂತಹ ಪವಿತ್ರ ಸ್ಥಳದಲ್ಲಿ ಪ್ರತಿ ಹುಣ್ಣಿಮೆಯಂದು ಗಿರಿಪ್ರದಕ್ಷಿಣೆ ನಡೆಯುತ್ತಿದೆ. ಯೋಗಿ ನಾರೇಯಣ ಮಠದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮು ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮ ಕೈಗೊಂಡಿದ್ದಾರೆ. ಆಲಂಬಗಿರಿ ಬೆಟ್ಟದ ಸಮೀಪ ಒಂದು ವೇದಿಕೆಯನ್ನು ನಿರ್ಮಿಸಿ ಅದರಲ್ಲಿ ಶಂಕು, ಚಕ್ರ ನಿರ್ಮಿಸಲಾಗಿದೆ ಮತ್ತು ಮಧ್ಯದಲ್ಲಿ ದೊಡ್ಡ ದೀಪದ ಕಂಬವನ್ನು ನಿರ್ಮಿಸಲಾಗಿದೆ. ಇದರಲ್ಲಿ ಪ್ರತಿ ಹುಣ್ಣಿಮೆಯಂದು ತುಪ್ಪದ ದೀಪ ಬೆಳಗಿಸಲಾಗುತ್ತದೆ.
Advertisement